ರಾಷ್ಟ್ರೀಯ

ಯುಪಿಎಸ್‌ಸಿ ಪರೀಕ್ಷೆ: ಟೀ ಮಾರುವವನ ಮಗನಿಗೆ 82ನೇ ರಾಂಕ್‌

Pinterest LinkedIn Tumblr


ಹೊಸದಿಲ್ಲಿ : ಜೈಸಲ್ಮೇರ್‌ನ ಸುಮಲಾಯ್‌ ಎಂಬ ಪುಟ್ಟ ಗ್ರಾಮದಲ್ಲಿ ಟೀ ಮಾರಿಕೊಂಡು ಜೀವನ ಸಾಗಿಸುತ್ತಿರುವ ಕುಶಾಲ್‌ದಾನ್‌ ಚರಣ್‌ ಎಂಬವರ ಮಗ ದೇಶಾಲ್‌ದಾನ್‌ 2017ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 82ನೇ ರಾಂಕ್‌ ಗಳಿಸುವ ಮೂಲಕ ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ 82ನೇ ರಾಂಕ್‌ ಪಡೆದಿರುವ ದೇಶಾಲ್‌ ದಾನ್‌ ನ ತಂದೆ ಕುಶಾಲ್‌ದಾನ್‌ ಅವರದ್ದು ತುಂಬ ಬಡ ಕುಟುಂಬ. ಹಾಗಿದ್ದರೂ ಕಠಿನ ಪರಿಶ್ರಮವೇ ಅವರ ಜೀವನದ ಮಂತ್ರ. ಅಪ್ಪನಂತೆ ಮಗ ಕೂಡ ಕಠಿನ ಪರಿಶ್ರಮಿಯೇ.

ಮಗನ ಶಿಕ್ಷಣಕ್ಕಾಗಿ ಅಪ್ಪ ಕುಶಾಲ್‌ದಾನ್‌ ಸಾಲವನ್ನು ಪಡೆದುಕೊಂಡಿದ್ದರು. ಯುಪಿಎಸ್‌ಸಿ ಪರೀಕ್ಷೆಗೆ ತರಬೇತಿ ಪಡೆಯಲು ಜೈಸಲ್ಮೇರ್‌ನಲ್ಲಿ ಅಂತಹ ಯಾವುದೇ ದೊಡ್ಡ ಪ್ರತಿಷ್ಠಿ ತ ಸಂಸ್ಥೆಗಳಿಲ್ಲ. ಹಾಗಿದ್ದರೂ ಮಗ ದೇಶಾಲ್‌ ದಾನ್‌ ತನ್ನ ಪ್ರಯತ್ನವನ್ನು ಕೈಬಿಡಲಿಲ್ಲ. ಕೊನೆಗೂ ಆತ ತನ್ನ ಆತ್ಮವಿಶ್ವಾಸದ ಬಲದಲ್ಲೇ ಪರೀಕ್ಷೆಯನ್ನು ಗೆದ್ದ. ಇಂದು ಆತನ ಈ ಸಾಧನೆಯ ಸಂಭ್ರಮವನ್ನು ಮನೆಯವರೆಲ್ಲ ಜತೆಗೂಡಿ ಹಂಚಿಕೊಳ್ಳುತ್ತಿದ್ದಾರೆ.

ಯುಪಿಎಸ್‌ಸಿ 750 ಪುರುಷರು ಮತ್ತು 240 ಮಹಿಳೆಯರು ಸೇರಿದಂತೆ ಒಟ್ಟು 990 ಅಭ್ಯರ್ಥಿಗಳನ್ನು ವಿವಿಧ ಸರಕಾರಿ ಸೇವೆಗಳಿಗೆ ಶಿಫಾರಸು ಮಾಡಿದೆ. ಈ ರೀತಿ ನೇಮಕಾತಿಗೆ ಶಿಫಾರಸು ಪಡೆದಿರುವವರಲ್ಲಿ 476 ಮಂದಿ ಜನರಲ್‌ ಕೆಟಗರಿಯವರು, 275 ಓಬಿಸಿಯವರು, 165 ಮಂದಿ ಎಸ್‌ಸಿ ಮತ್ತು 74 ಮಂದಿ 74 ಎಸ್‌ಟಿ ಕೆಟಗರಿಗೆ ಸೇರಿದವರಾಗಿದ್ದಾರೆ.

2017ರ ಯುಪಿಎಸ್‌ಸಿ ಪರೀಕ್ಷೆಯನ್ನು 2017ರ ಜೂನ್‌ 18ರಂದು ನಡೆಸಲಾಗಿತ್ತು. 9,57,590 ಮಂದಿ ಅರ್ಜಿ ಹಾಕಿದ್ದರು. 4,56,.625 ಮಂದಿ ಪರೀಕ್ಷೆಗೆ ಕುಳಿತಿದ್ದರು. 13,366 ಮಂದಿ 2017ರ ಅಕ್ಟೋಬರ್‌ -ನವೆಂಬರ್‌ನಲ್ಲಿ ನಡೆದಿದ್ದ ಲಿಖೀತ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದರು. 2018ರ ಫೆಬ್ರವರಿ ಎಪ್ರಿಲ್‌ನಲ್ಲಿ ನಡೆದಿದ್ದ ಪರ್ಸನಾಲಿಟಿ ಟೆಸ್ಟ್‌ಗೆ 2,568 ಮಂದಿ ಅರ್ಹತೆ ಪಡೆದಿದ್ದರು.

-ಉದಯವಾಣಿ

Comments are closed.