ರಾಷ್ಟ್ರೀಯ

ವರ್ಷಕ್ಕೆ 5 ಕೋಟಿ: Dalmia ಸಮೂಹದಿಂದ ದಿಲ್ಲಿಯ ಕೆಂಪು ಕೋಟೆ ದತ್ತು

Pinterest LinkedIn Tumblr


ಹೊಸದಿಲ್ಲಿ : ಪಾರಂಪರಿಕ ತಾಣವೊಂದನ್ನು ದತ್ತು ಪಡೆಯಿರಿ ಯೋಜನೆಯಡಿ ದಿಲ್ಲಿಯ ಕೆಂಪು ಕೋಟೆಯನ್ನು ವರ್ಷಕ್ಕೆ 5 ಕೋಟಿ ರೂ. ಲೀಸಿನ ಮೇಲೆ ದತ್ತು ಪಡೆಯುವ ಸಂಬಂಧ ತಿಳಿವಳಿಕೆ ಒಪ್ಪಂದವೊಂದಕ್ಕೆ ದಾಲ್‌ಮಿಯಾ ಭಾರತ್‌ ಲಿಮಿಟೆಡ್‌ ಕಂಪೆನಿ ಸಹಿಹಾಕಿರುವುದು ಇದೀಗ ವಿವಾದಕ್ಕೆ ಕಾರಣವಾಗಿದ್ದು ಈ ಡೀಲ್‌ ಅನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಈ ಕ್ರಮವನ್ನು ಟ್ವಿಟರ್‌ನಲ್ಲಿ ಲೇವಡಿ ಮಾಡಿರುವ ಕಾಂಗ್ರೆಸ್‌ ಪಕ್ಷ, ಸರಕಾರವು ಸದ್ಯವೇ ದತ್ತಿಗೆ ಕೊಡಲಿರುವ ಈ ಕೆಳಗಿನವುಗಳಲ್ಲಿ ಯಾವುದೆಂಬುದನ್ನು ಗುರುತಿಸಿ ಎಂದು ಜನರನ್ನು ಪ್ರಶ್ನಿಸಿದೆ : 1. ಸಂಸತ್ತು, 2. ಲೋಕ ಕಲ್ಯಾಣ ಮಾರ್ಗ, 3. ಸರ್ವೋಚ್ಚ ನ್ಯಾಯಾಲಯ. 4. ಮೇಲಿನ ಎಲ್ಲವೂ.

ಕಾಂಗ್ರೆಸ್‌ನ ಈ ಲೇವಡಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಹಾಯಕ ಸಂಸ್ಕೃತಿ ಸಚಿವ ಮಹೇಶ್‌ ಶರ್ಮಾ ಈ ರೀತಿ ಹೇಳಿದ್ದಾರೆ :

“ರಾಷ್ಟ್ರಪತಿಗಳು 2017 ವಿಶ್ವ ಪ್ರವಾಸೋದ್ಯಮ ದಿನದಂದು ಜಿಓಐ ಸ್ಕೀಮ್‌ ಪ್ರಕಟಿಸಿ ಪಾರಂಪರಿಕ ತಾಣದ ಮೌಲ್ಯವರ್ಧನೆಗಾಗಿ ಅವುಗಳನ್ನು ದತ್ತುತೆಗೆದುಕೊಳ್ಳುವ ಆಸಕ್ತಿ ಇರುವವರು ಮುಂದೆ ಬರುವಂತೆ ಕೋರಿದ್ದರು. ಅಂತೆಯೇ ಕೆಂಪು ಕೋಟೆಯಲ್ಲಿನ ಕೆಲವೊಂದು ಸೇವೆಗಳನ್ನು ದಾಲ್‌ಮಿಯ ಸಮೂಹಕ್ಕೆ ವಹಿಸಿಕೊಡಲಾಗಿದೆ. ಇದರಲ್ಲಿ ಯಾವುದೇ ಲಾಭದ ವಿಷಯ ಇಲ್ಲ’.

ವರದಿಗಳ ಪ್ರಕಾರ ದಾಲ್‌ಮಿಯ ಸಮೂಹವು ಮುಂದಿನ ಐದು ವರ್ಷಗಳ ಅವಧಿಗೆ, ವರ್ಷಕ್ಕೆ 5 ಕೋಟಿ ರೂ. ಪಾವತಿ ಆಧಾರದಲ್ಲಿ, ಕೆಂಪು ಕೋಟೆಯ ನಿರ್ವಹಣೆಯನ್ನು ದತ್ತು ಪಡೆದುಕೊಂಡಿದ್ದು ಆ ಮೂಲಕ ಅದು ವಿವಿಧ ಖಾಸಗಿ ವಲಯದ ಕಂಪೆನಿಗಳು ಇರುವ “ಸ್ಮಾರಕ ಮಿತ್ರ’ ಪಟ್ಟಿಗೆ ಸೇರ್ಪಡೆಗೊಂಡಿದೆ.

ಪ್ರವಾಸೋದ್ಯಮ ಸಚಿವ (ಸ್ವತಂತ್ರ ಹುದ್ದೆ) ಕೆ ಜೆ ಅಲ್‌ಫೋನ್ಸ್‌ ಮತ್ತು ಪ್ರವಾಸೋದ್ಯಮ ಸಚಿವಾಲಯ ಮತ್ತು ಪ್ರಾಕ್ತನ ಸರ್ವೇಕ್ಷಣ ಇಲಾಖೆಯ ಇತರ ಕೆಲವು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ದಾಲ್‌ಮಿಯ ಸಮೂಹ ಕೆಂಪು ಕೋಟೆ ನಿರ್ವಹಣೆ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ವರದಿಗಳು ತಿಳಿಸಿವೆ.

-ಉದಯವಾಣಿ

Comments are closed.