ರಾಷ್ಟ್ರೀಯ

ಶೀಘ್ರದಲ್ಲೇ ಎಟಿಎಂ, ಚೆಕ್‌, ಕಾರ್ಡ್‌ ವಹಿವಾಟಿಗೂ ಶುಲ್ಕ?

Pinterest LinkedIn Tumblr

ನವದೆಹಲಿ: ಉಚಿತ ಸೇವೆಗಳಿಗೂ ತೆರಿಗೆ ಪಾವತಿಸುವಂತೆ ಎಚ್‌ಡಿಎಫ್‌ಸಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಐಸಿಐಸಿಐ, ಕೊಟಕ್ ಮಹಿಂದ್ರಾ, ಆ್ಯಕ್ಸಿಸ್ ಮತ್ತಿತರ ಪ್ರಮುಖ ಬ್ಯಾಂಕ್‌ಗಳಿಗೆ ತೆರಿಗೆ ಇಲಾಖೆ ಸೂಚಿಸಿದೆ. ಇತರ ಬ್ಯಾಂಕ್‌ಗಳಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ. ಪರಿಣಾಮವಾಗಿ ಎಟಿಎಂ, ಚೆಕ್‌, ಕಾರ್ಡ್‌ ವಹಿವಾಟಿಗೂ ಬ್ಯಾಂಕ್‌ಗಳು ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.

ಕಳೆದ ಐದು ವರ್ಷಗಳಿಗೆ ಪೂರ್ವಾನ್ವಯವಾಗುವಂತೆ ಸೇವಾ ತೆರಿಗೆ ಪಾವತಿಸಲು ಸರಕು ಮತ್ತು ಸೇವಾ ತೆರಿಗೆಗಳ ಪ್ರಧಾನ ನಿರ್ದೇಶನಾಲಯ (ಡಿಜಿಜಿಎಸ್‌ಟಿ) ಬ್ಯಾಂಕ್‌ಗಳಿಗೆ ಶೋಕಾಸ್ ನೋಟಿಸ್‌ ನೀಡಿದೆ. ಪರಿಣಾಮವಾಗಿ ಬ್ಯಾಂಕ್‌ಗಳು ಸುಮಾರು ₹6,000 ಕೋಟಿ ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಾದಲ್ಲಿ ತೆರಿಗೆಯ ಹೊರೆಯನ್ನು ಬ್ಯಾಂಕ್‌ಗಳು ಗ್ರಾಹಕರ ಮೇಲೆ ವರ್ಗಾಯಿಸುವ ಸಾಧ್ಯತೆ ಇದೆ.

ಕೆಲವೊಂದು ಬ್ಯಾಂಕ್‌ಗಳು ಎಟಿಎಂನಿಂದ ನಗದು ತೆಗೆಯುವುದು, ಚೆಕ್ ಪುಸ್ತದ ಮೂಲಕ ಮಾಡುವ ವಹಿವಾಟು ಮತ್ತು ಕಾರ್ಡ್‌ ಸೇವೆಗಳಿಗೆ ಶುಲ್ಕ ಪಡೆಯುತ್ತವೆ. ಆದಾಗ್ಯೂ, ಸಾಮಾನ್ಯವಾಗಿ ಕನಿಷ್ಠ ಮೊತ್ತ ಉಳಿಸಿಕೊಂಡಿರುವ ಗ್ರಾಹಕರಿಗೆ ಹೆಚ್ಚಿನ ಬ್ಯಾಂಕ್‌ಗಳು ಉಚಿತವಾಗಿ ಸೇವೆ ನೀಡುತ್ತವೆ. ಕನಿಷ್ಠ ಮೊತ್ತ ಉಳಿಸಿಕೊಂಡಿರದ ಗ್ರಾಹಕರಿಗೆ ದಂಡ ವಿಧಿಸುತ್ತವೆ. ಬ್ಯಾಂಕ್‌ನ ಈ ಸೇವೆಗಳೂ ತೆರಿಗೆ ವ್ಯಾಪ್ತಿಗೆ ಸೇರುತ್ತವೆ. ಇದರ ಆಧಾರದಲ್ಲಿ ಪ್ರಮುಖ ಬ್ಯಾಂಕ್‌ಗಳಿಗೆ ಡಿಜಿಜಿಎಸ್‌ಟಿ ನೋಟಿಸ್ ನೀಡಿದೆ. ಇತರ ಬ್ಯಾಂಕ್‌ಗಳಿಗೂ ಶೀಘ್ರದಲ್ಲೇ ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹಿಂಪಡೆಯುವಂತೆ ಮನವಿ ಮಾಡಲು ಚಿಂತನೆ: ಉಚಿತವಾಗಿ ನೀಡುವ ಸೇವೆಗಳಿಗೂ ತೆರಿಗೆ ವಿಧಿಸುವಂತೆ ನೋಟಿಸ್ ನೀಡಿರುವ ನಿರ್ಧಾರವನ್ನು ಹಿಂಪಡೆಯುವಂತೆ ಸರ್ಕಾರವನ್ನು ಆಗ್ರಹಿಸಲು ಭಾರತೀಯ ಬ್ಯಾಂಕುಗಳ ಸಂಘಟನೆ ಮುಂದಾಗಿದೆ ಎಂದೂ ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.

‘ಉಚಿತವಾಗಿ ನೀಡುವ ಸೇವೆಗಳಿಗೂ ತೆರಿಗೆ ವಿಧಿಸುವ ವಿಷಯಕ್ಕೆ ಸಂಬಂಧಿಸಿ ಸಂಘಟನೆ ಈಗಾಗಲೇ ಒಂದು ಬಾರಿ ಸಭೆ ನಡೆಸಿದ್ದು, ಸರ್ಕಾರದ ಜತೆ ಚರ್ಚಿಸಲಿದೆ’ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಖ್ಯ ಹಣಕಾಸು ಅಧಿಕಾರಿ ಅಂಶುಲಾ ಕಾಂತ್ ತಿಳಿಸಿದ್ದಾರೆ.

Comments are closed.