ರಾಷ್ಟ್ರೀಯ

ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಆರೋಪ: 1998ರ ಕೊಯಮತ್ತೂರು ಸ್ಫೋಟ ಪ್ರಕರಣದ ದೋಷಿಯ ಬಂಧನ

Pinterest LinkedIn Tumblr

ಕೊಯಮತ್ತೂರು: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇರೆಗೆ ಕೊಯಮತ್ತೂರಿನಲ್ಲಿ ಓರ್ವ ವ್ಯಕ್ತಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪಕ್ಕೆ ಸಂಬಂಧಿಸಿದಂತೆ 1998ರ ಕೊಯಮತ್ತೂರು ಸರಣಿ ಸ್ಫೋಟದಲ್ಲಿ ಶಿಕ್ಷೆ ಅನುಭವಿಸಿದ್ದ ಮೊಹಮ್ಮದ್‌ ರಫೀಕ್‌ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಈತ ಕೊಯಮತ್ತೂರಿನ ಕುಣಿಯಮತ್ತೂರು ಪ್ರದೇಶದ ನಿವಾಸಿ ಎನ್ನಲಾಗಿದೆ.

ಮೂಲಗಳ ಪ್ರಕಾರ ಆರೋಪಿ ಮೊಹಮದ್ ರಫೀಕ್, ಗುತ್ತಿಗೆದಾರನೊಬ್ಬನ ಜತೆಗಿನ ಫೋನ್‌ ಸಂಭಾಷಣೆ ವೇಳೆ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡಲು ನಿರ್ಧರಿಸಲಾಗಿದೆ ಎಂಬ ಅಂಶವನ್ನು ಹೇಳಿದ್ದಾಗಿ ಕೊಯಮತ್ತೂರು ಪೊಲೀಸರು ತಿಳಿಸಿದ್ದಾರೆ. ಸುಮಾರು 8 ನಿಮಿಷಗಳ ಸಂಭಾಷಣೆಯ ಈ ಧ್ವನಿಮುದ್ರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಾರಿಗೆ ಗುತ್ತಿಗೆದಾರ ಪ್ರಕಾಶ್‌ ಅವರ ಜತೆ ಫೋನ್‌ನಲ್ಲಿ ಮಾತನಾಡುವಾಗ ರಫೀಕ್‌ ಈ ಅಂಶ ಹೇಳಿದ್ದಾನೆ ಎನ್ನಲಾಗಿದೆ. ಇದೇ ಕಾರಣಕ್ಕೆ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಗುತ್ತಿಗೆದಾರನನ್ನು ಬೆದರಿಸಲು ಹೀಗೆ ಹೇಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇನ್ನು ಬಂಧಿತ ರಫೀಕ್ ವಿರುದ್ಧ ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಪ್ರಸ್ತುತ ರಫೀಕ್ ವಿರುದ್ಧ ಗೊಂಡಾ ಕಾಯ್ದೆ, ಭಯೋತ್ಪಾದಕ ನಿಗ್ರಹ ಕಾಯ್ದೆ, ಟಾಡಾ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದಲ್ಲದೆ ಐಪಿಸಿ ಸೆಕ್ಷನ್ 153 (A) ಮತ್ತು 560 (i) ನಡಿಯಲ್ಲೂ ದೂರು ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ ಈತನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ರಫೀಕ್‌ ಹೇಳಿದ್ದೇನು?
ಸಂಭಾಷಣೆ ವೇಳೆ ರಫೀಕ್‌, ‘1998ರಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿ ನಗರಕ್ಕೆ ಭೇಟಿ ನೀಡಿದ್ದಾಗಲೂ ಬಾಂಬ್‌ ಇರಿಸಿದ್ದೆ. ನನ್ನ ವಿರುದ್ಧ ಹಲವು ಕೇಸುಗಳಿದ್ದು, 100ಕ್ಕೂ ಹೆಚ್ಚು ವಾಹನಗಳನ್ನು ಧ್ವಂಸ ಮಾಡಿರುವೆ’ ಎಂದು ಹೇಳಿದ್ದಾನೆ.

Comments are closed.