ರಾಷ್ಟ್ರೀಯ

ಪುತ್ರಭಾಗ್ಯಕ್ಕಾಗಿ ಹದಿಹರೆಯದ ಯುವತಿ ಅಪಹರಣ, ವಿವಾಹ

Pinterest LinkedIn Tumblr


ಪುಣೆ: ಜಿಲ್ಲಾ ಪರಿಷತ್ ಶಾಲೆಯೊಂದರಲ್ಲಿ ಶಿಕ್ಷಕನಾಗಿರುವ 45 ವರ್ಷದ ವ್ಯಕ್ತಿಯೋರ್ವ ಗಂಡು ಸಂತಾನ ಬೇಕೆಂಬ ಹಠಕ್ಕೆ ಬಿದ್ದು ಹದಿಹರೆಯದ ಯುವತಿಯನ್ನು ಅಪಹರಿಸಿ ಬಲವಂತವಾಗಿ ಮದುವೆಯಾದ ಪ್ರಸಂಗ ಪುಣೆಯಲ್ಲಿ ನಡೆದಿದೆ. ಆರೋಪಿ ಈಗ ಪೊಲೀಸರ ವಶದಲ್ಲಿದ್ದು ವಿಚಾರಣೆ ಮುಂದುವರೆದಿದೆ.

ಆರೋಪಿಗೆ ಇದು ಎರಡನೆಯ ಮದುವೆಯಾಗಿದ್ದು, ಮೊದಲ ಪತ್ನಿಯಿಂದ 14 ವರ್ಷದ ಮಗಳಿದ್ದಾಳೆ. ಆದರೆ ಗಂಡು ಮಗು ಬೇಕೆ ಬೇಕು ಎನ್ನುತ್ತಿದ್ದ ಆತ ಇದೇ ಕಾರಣಕ್ಕೆ 19 ವರ್ಷದ ಯುವತಿಯನ್ನು ಅಪಹರಿಸಿ ಒತ್ತಾಯಪೂರ್ವಕವಾಗಿ ತಾಳಿ ಕಟ್ಟಿದ್ದಾನೆ. ಇನ್ನೊಂದು ದುರದೃಷ್ಟಕರ ಸಂಗತಿ ಎಂದರೆ ಹಣದ ಆಮಿಷಕ್ಕೆ ಒಳಗಾದ ಆಕೆಯ ಪೋಷಕರು ಸಹ ಆರೋಪಿ ಶಿಕ್ಷಕನಿಗೆ ಸಾಥ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಶಿಕ್ಷಕನ ಕುಟುಂಬ ಗಂಡು ಮಗುವಿನ ಆಕಾಂಕ್ಷಿಯಾಗಿತ್ತು. ಹೀಗಾಗಿ ಆತನಿಗೆ ಮರು ಮದುವೆ ಮಾಡುವ ಪ್ರಯತ್ನ ನಡೆಸಲಾಗಿತ್ತು. ಮದುವೆ ಮಾಡಿಸಲು ಹೆಣ್ಣಿನ ಹುಡುಕಾಟದಲ್ಲಿದ್ದಾಗ ಯುವತಿಯ ಪೋಷಕರು ಸಂಪರ್ಕಕ್ಕೆ ಸಿಕ್ಕಿದ್ದಾರೆ. ಮಗಳನ್ನು ಮದುವೆ ಮಾಡಿಕೊಟ್ಟರೆ ನೀವು ಮಾಡಿರುವ 5 ಲಕ್ಷ ರೂಪಾಯಿ ಸಾಲವನ್ನು ನಾವೇ ತೀರಿಸುತ್ತೇವೆ ಮತ್ತು ಒಂದು ಮನೆಯನ್ನು ಕೊಡುವುದಾಗಿ ಯುವತಿಯ ತಂದೆಗೆ ಆಮಿಷ ಒಡ್ಡಲಾಯಿತು. ಮದುವೆಗೆ ಒಪ್ಪದ ಯುವತಿಯನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಲಾಗಿತ್ತು. ಬಲಿಪಶುವಿನ ಹೇಳಿಕೆಯ ಆಧಾರದ ಮೇಲೆ ಶಿಕ್ಷಕನ ಜತೆಗೆ , ಆತನ ಮೊದಲ ಪತ್ನಿ ಮತ್ತು ಯುವತಿಯ ಪೋಷಕರನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬೆಳಕಿಗೆ ಬಂದಿದ್ದು ಹೇಗೆ?

ಬಲವಂತದ ಮದುವೆ ಬಳಿಕ ಗೃಹ ಬಂಧನದಲ್ಲಿದ್ದ ಯುವತಿ ತನ್ನ ಜತೆ ನಡೆದ ಅನ್ಯಾಯವನ್ನು ವಿವರಿಸಿ ವಿಡಿಯೋ ಕ್ಲಿಪ್ ಮಾಡಿ, ಅದನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ರವಾನಿಸಿದ್ದಾಳೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ.

ಪೊಲೀಸರ ಸಹಕಾರದಿಂದ ತನ್ನ ಪೋಷಕರ ಬಳಿಗೆ ಬಂದ ಯುವತಿಗೆ ಅಲ್ಲಿಯೂ ರಕ್ಷಣೆ ದೊರಕಿಲ್ಲ. ಬದಲಾಗಿ ಆರೋಪಿ ಶಿಕ್ಷಕನ ಬಳಿ ಹಿಂತಿರುಗುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಾರೆ. ಬೇರೆ ದಾರಿ ಕಾಣದಾದ ಯುವತಿ ಏಪ್ರೀಲ್ 20 ರಂದು ಸಾಂಗ್ವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಶಿಕ್ಷಕ ಸೇರಿದಂತೆ 15 ಜನರ ವಿರುದ್ಧ ಭಾರತೀಯ ದಂಡ ಸಂಹಿತೆ ವಿಭಾಗ 366, 384 ಮತ್ತು 385 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.