ರಾಷ್ಟ್ರೀಯ

‘ಹೆದ್ದಾರಿ ಬದಿ ಮದ್ಯದಂಗಡಿ ನಿಷೇಧ ವಿಫಲ: ಶೇ 70ರಷ್ಟು ವಹಿವಾಟು ಅಬಾಧಿತ’

Pinterest LinkedIn Tumblr


ಚಂಡೀಗಢ: ರಾಷ್ಟ್ರೀಯ ಹೆದ್ದಾರಿಗಳ ಸಮೀಪ 500 ಮೀಟರ್‌ ಒಳಗೆ ಮದ್ಯದಂಗಡಿಗಳನ್ನು ನಿಷೇಧಿಸಿ ಸುಪ್ರೀಂ ಕೋರ್ಟ್‌ ಹೊರಡಿಸಿದ್ದ ಆದೇಶದಿಂದ ಶೇ 70ರಷ್ಟು ಮದ್ಯದಂಗಡಿಗಳು ವಿನಾಯಿತಿ ಪಡೆದುಕೊಂಡಿವೆ. ಹೆದ್ದಾರಿ ಬದಿ ಮದ್ಯದಂಗಡಿಗಳ ನಿಷೇಧ ಕೋರಿ ಸುಪ್ರೀಂ ಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ರಸ್ತೆ ಸುರಕ್ಷತಾ ಕಾರ್ಯಕರ್ತ ಹರ್ಮನ್‌ ಸಿಧು ಅವರೇ ಈ ಮಾಹಿತಿ ನೀಡಿದ್ದಾರೆ.

‘ನನ್ನ ಹುಟ್ಟೂರಾದ ಚಂಡೀಗಢದಲ್ಲಂತೂ ಎಲ್ಲ ಮದ್ಯದಂಗಡಿಗಳೂ ವಿನಾಯಿತಿ ಪಡೆದುಕೊಂಡು ಮೊದಲಿನಂತೆಯೇ ವ್ಯವಹಾರ ನಡೆಸುತ್ತಿವೆ. ಇದು ಅತ್ಯಂತ ನಿರಾಶೆಯುಂಟುಮಾಡಿದೆ’ ಎಂದು ಸಿಧು ಬೇಸರದಿಂದ ಹೇಳುತ್ತಾರೆ.

20 ವರ್ಷಗಳ ಹಿಂದೆ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡು ಸೊಂಟದ ಕೆಳಗಿನ ಬಲವನ್ನೇ ಕಳೆದುಕೊಂಡ ಅವರು, ಬಳಿಕ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ‘ಅರೈವ್‌ ಸೇಫ್‌’ ಎಂಬ ಎನ್‌ಜಿಓ ಆರಂಭಿಸಿದ್ದರು.

‘ಸುಪ್ರೀಂ ಕೋರ್ಟ್ ಆದೇಶವನ್ನು ಹೇಗೆ ವಿಫಲಗೊಳಿಸಬಹುದು ಮತ್ತು ಅದರ ಪರಿಣಾಮದಿಂದ ತಪ್ಪಿಸಿಕೊಳ್ಳಬಹುದು ಎಂಬುದಕ್ಕೆ ಚಂಡೀಗಢ ದೇಶಕ್ಕೇ ಕೆಟ್ಟ ಮಾದರಿಯನ್ನು ಹಾಕಿಕೊಟ್ಟಿದೆ’ ಎಂದು ಸಿಧು ಹೇಳಿದರು.

‘ಪ್ರಸ್ತುತ ಬಹುತೇಕ ಎಲ್ಲ ಹೆದ್ದಾರಿಗಳು ಮಹಾನಗರ ಪಾಲಿಕೆಗಳು, ನಗರಸಭೆಗಳು ಅಥವಾ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಬರುತ್ತವೆ. ಅವುಗಳಿಗೆ ಸ್ವತಃ ಕೋರ್ಟೇ ವಿನಾಯಿತಿ ನೀಡಿದೆ. ಸುಪ್ರೀಂ ಆದೇಶದ ಬಳಿಕ ಮದ್ಯದಂಗಡಿಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಣಬೆಗಳಂತೆ ಹುಟ್ಟಿಕೊಂಡಿವೆ. ಸುಪ್ರೀಂ ಕೋರ್ಟ್‌ ಆದೇಶ ಎಲ್ಲಿ ಅನುಷ್ಠಾನವಾಗಿದೆ ಎಂಬುದೇ ಅಚ್ಚರಿಯ ಪ್ರಶ್ನೆ’ ಎಂದು ಸಿಧು ವಿಷಾದದಿಂದ ನುಡಿಯುತ್ತಾರೆ.

ಕಳೆದ ವರ್ಷದ ಮಾರ್ಚ್‌ 31ರಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶದಲ್ಲಿ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ 500 ಮೀಟರ್‌ ಒಳಗಿನ ಎಲ್ಲ ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶಿಸಿತ್ತು. ನಗರ ಮಿತಿ ಒಳಗಿನ ಹೆದ್ದಾರಿಗಳಿಗೆ ಈ ಆದೇಶ ಅನ್ವಯವಾಗದು ಎಂದೂ ಅನಂತರ ಕೋರ್ಟ್‌ ಸ್ಪಷ್ಟನೆ ನೀಡಿತ್ತು.

Comments are closed.