ರಾಷ್ಟ್ರೀಯ

48 ಮಂದಿ ಎಂಪಿ, ಎಂಎಲ್‌ಎಗಳ ಮೇಲಿವೆ ಮಹಿಳಾ ದೌರ್ಜನ್ಯದ ಕೇಸ್‌!

Pinterest LinkedIn Tumblr


ಹೊಸದಿಲ್ಲಿ: ದೇಶದಲ್ಲಿ ಅತ್ಯಾಚಾರ ಮತ್ತು ಮಹಿಳಾ ದೌರ್ಜನ್ಯದ ವಿರುದ್ಧ ಆಕ್ರೋಶ ತೀವ್ರವಾಗಿದ್ದು ಈ ವೇಳೆ 48 ಜನಪ್ರತಿನಿಧಿಗಳ ಮೇಲೆ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಗಳು ದಾಖಲಾಗಿರುವ ಬಗ್ಗೆ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

ಅಸೋಸಿಯೇಷನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾರ್ಮ್ಸ್‌(ADR) ಬಹಿರಂಗ ಪಡಿಸಿರುವ ವರದಿಯಲ್ಲಿ ಈ ಕಳವಳಕಾರಿ ಅಂಶ ಬಯಲಾಗಿದ್ದು, ಕಳೆದ 5 ವರ್ಷಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳು 327 ಮಂದಿ ಮಹಿಳಾ ದೌರ್ಜನ್ಯ ಕೇಸ್‌ ದಾಖಲಾದವರಿಗೆ ಟಿಕೆಟ್‌ ನೀಡಿದ್ದು, 118 ಮಂದಿ ಪಕ್ಷೇತರವಾಗಿ ಕಣಕ್ಕಿಳಿದಿದ್ದಾರೆ ಎಂದು ವರದಿ ಹೇಳಿದೆ.

ರಾಜ್ಯ ಸಭೆ ಮತ್ತು ಲೋಕಸಭೆಗೂ 40 ಮಂದಿ ಇಂತಹ ಕೇಸ್‌ ಹೊಂದಿದ್ದವರಿಗೆ ಟಿಕೆಟ್‌ಗಳನ್ನು ನೀಡಲಾಗಿದೆ. ವಿಧಾನಸಭಾ ಚುನಾವಣೆಗೆ ವಿವಿಧ ಪಕ್ಷಗಳು ಕೇಸ್‌ ಹೊಂದಿದ್ದ 287 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿವೆ ಎಂದು ವರದಿ ಹೇಳಿದೆ.

ಮಹಾರಾಷ್ಟ್ರದಲ್ಲಿ ಜನಪ್ರತಿನಿಧಿಗಳ ಮೇಲೆ ಗರಿಷ್ಠ ಅಂದರೆ 12 ಮಂದಿಯ ಮೇಲೆ ಮಹಿಳಾ ದೌರ್ಜನ್ಯದ ಕೇಸ್‌ ಗಳು ದಾಖಲಾಗಿವೆ. ಪಶ್ಚಿಮ ಬಂಗಾಲದಲ್ಲಿ 12 ಮಂದಿ, ಒಡಿಶಾ ಮತ್ತು ಆಂಧ್ರದಲ್ಲಿ ತಲಾ 5 ಮಂದಿಯ ಮೇಲೆ ಮಹಿಳಾ ದೌರ್ಜನ್ಯದ ಪ್ರಕರಣಗಳಿವೆ ಎಂದು ವರದಿ ಹೇಳಿದೆ.

ಮಹಾರಾಷ್ಟ್ರದಲ್ಲಿ ಮಹಿಳಾ ದೌರ್ಜನ್ಯ ಎದುರಿಸುತ್ತಿರುವ 65 ಮಂದಿಗೆ ಟಿಕೆಟ್‌ ನೀಡಲಾಗಿದ್ದರೆ ಬಿಹಾರದಲ್ಲಿ 62 ಮತ್ತು ಪಶ್ಚಿಮ ಬಂಗಾಲದಲ್ಲಿ 52 ಮಂದಿಗೆ ಟಿಕೆಟ್‌ ನೀಡಲಾಗಿದೆ ಎಂದು ವರದಿ ಹೇಳಿದೆ.

ಪಕ್ಷಗಳ ಪೈಕಿ ಇಂತಹ ಪ್ರಕರಣ ಹೊಂದಿರುವವರ ಗರಿಷ್ಠ ಸಂಖ್ಯೆ ಬಿಜೆಪಿಯದ್ದಾಗಿದ್ದು, 12 ಮಂದಿಯ ವಿರುದ್ಧ ಪ್ರಕರಣಗಳಿದ್ದು, ಶಿವಸೇನೆಯ 7 ಮಂದಿ, ತೃಣಮೂಲ ಕಾಂಗ್ರೆಸ್‌ನ 7 ಮಂದಿ ಸಂಸದ, ಶಾಸಕರ ಮೇಲೆ ಪ್ರಕರಣಗಳಿವೆ ಎಂದು ವರದಿ ಹೇಳಿದೆ.

ಬಿಜೆಪಿ ಮಹಿಳಾ ದೌರ್ಜನ್ಯ ಕೇಸ್‌ ಎದುರಿಸುತ್ತಿರುವ 47 ಮಂದಿಗೆ ಟಿಕೆಟ್‌ ನೀಡಿದ್ದು, ಬಿಎಸ್‌ಪಿ 35 ಮಂದಿಗೆ ಟಿಕೆಟ್‌ ನೀಡಿದ್ದು, ಕಾಂಗ್ರೆಸ್‌ 24 ಮಂದಿಗೆ ನೀಡಿದೆ.

-ಉದಯವಾಣಿ

Comments are closed.