ರಾಷ್ಟ್ರೀಯ

Kathua Rape: ಜಮ್ಮು ಕಾಶ್ಮೀರದ ಒಂಬತ್ತು ಸಚಿವರಿಗೂ ರಾಜೀನಾಮೆ ನೀಡಿ ಎಂದ ಬಿಜೆಪಿ

Pinterest LinkedIn Tumblr


ಶ್ರೀನಗರ: ದೇಶಾದ್ಯಂತ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿರುವ ಜಮ್ಮು-ಕಾಶ್ಮೀರದ ಕಠುವಾ ಅತ್ಯಾಚಾರ ಪ್ರಕರಣ ಇದೀಗ ರಾಜ್ಯದ ಬಿಜೆಪಿ-ಪಿಡಿಪಿ ಮೈತ್ರಿ ಸರಕಾರದ ಮೇಲೆ ಪರಿಣಾಮ ಬೀರಿದ್ದು, ಪಕ್ಷದ ಎಲ್ಲಾ ಒಂಬತ್ತು ಸಚಿವರಿಗೂ ರಾಜೀನಾಮೆ ಸಲ್ಲಿಸುವಂತೆ ಬಿಜೆಪಿ ಸೂಚಿಸಿದೆ.

ಅತ್ಯಾಚಾರ ಆರೋಪಿಗೆ ಬೆಂಬಲಿಸಿದ ಕಾರಣಕ್ಕಾಗಿ ಇಬ್ಬರು ಬಿಜೆಪಿ ಸಚಿವರಾದ ಲಾಲ್‌ ಸಿಂಗ್‌ ಮತ್ತು ಚಂದ್ರ ಪ್ರಕಾಶ್‌ ಗಂಗಾ ಅವರ ತಲೆದಂಡವಾದ ಬೆಳವಣಿಗೆ ಬೆನ್ನಲ್ಲೇ, ಬಿಜೆಪಿಯ ಈ ಖಡಕ್‌ ಆದೇಶ ಮಹತ್ವ ಪಡೆದಿದೆ.

ಸಂಪುಟಕ್ಕೆ ಹೊಸ ಮುಖಗಳನ್ನು ಪರಿಚಿಯಿಸುವ ಸಲುವಾಗಿ ಬಿಜೆಪಿ ತನ್ನೆಲ್ಲಾ ಸಚಿವರಿಗೆ ಸಂಪುಟ ತ್ಯಜಿಸುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಲಾಲ್‌ ಮತ್ತು ಗಂಗಾ ಅವರು ಅತ್ಯಾಚಾರ ಆರೋಪಿ ಪರ ನಡೆದ ರಾರ‍ಯಲಿಯಲ್ಲಿ ಪಾಲ್ಗೊಂಡ ಬಳಿಕ ಪ್ರತಿಪಕ್ಷಗಳ ಮತ್ತು ಸ್ಥಳೀಯ ತೀವ್ರ ಆಕ್ರೋಶಕ್ಕೆ ಬಿಜೆಪಿ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿರುವ ಕಮಲ ಪಾಳಯ, ಸಂಪುಟದಲ್ಲಿ ಬಿಜೆಪಿ ಸಚಿವರುಗಳ ಸ್ಥಾನಾಂತರಕ್ಕೆ ನಿರ್ಧಾರ ಕೈಗೊಂಡಿದೆ.

ಲಾಲ್‌ ಪ್ರತಿಭಟನೆ
ಈ ಮಧ್ಯೆ, ಅತ್ಯಾಚಾರ ಆರೋಪಿಗಳನ್ನು ಬೆಂಬಲಿಸಿದ್ದಕ್ಕಾಗಿ ರಾಜೀನಾಮೆ ನೀಡಿದ ಬಿಜೆಪಿ ಮಾಜಿ ಸಚಿವ ಲಾಲ್‌ ಸಿಂಗ್‌ ಅತ್ಯಾಚಾರ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹಿಸಿ ಮಂಗಳವಾರ ರಾರ‍ಯಲಿ ನಡೆಸುವ ಮೂಲಕ ಗಮನ ಸೆಳೆದರು. ಅಲ್ಲದೆ, ಪ್ರಕರಣ ನಿಭಾಯಿಸಲು ವಿಫಲರಾಗಿರುವ ಸಿಎಂ ಮುಫ್ತಿ ರಾಜೀನಾಮೆ ನೀಡಬೇಕೆಂದು ಲಾಲ್‌ ಆಗ್ರಹಿಸಿದ್ದು ವಿಶೇಷವಾಗಿತ್ತು. ಪ್ರಸ್ತುತ ಬೆಳವಣಿಯಿಂದ ಪಿಡಿಪಿ ಮತ್ತು ಬಿಜೆಪಿ ನಡುವೆ ಅಂತರ ಹೆಚ್ಚಾಗುವ ಮುನ್ನವೇ ಸಚಿವ ಸಂಪುಟಕ್ಕೆ ಹೊಸಬರ ನೇಮಕದ ಮೂಲಕ ಬಿಜೆಪಿ ಹಾನಿ ತಡೆಗೆ ಮುಂದಾಗಿದೆ.

ಮುಂದಿನ ವಾರ ಸಂಪುಟ ಪುನಾರಚನೆ?

ಉನ್ನತ ಮೂಲಗಳ ಪ್ರಕಾರ, ಮುಂದಿನ ವಾರ ಸಂಪುಟ ಪುನಾರಚನೆಯಾಗಲಿದ್ದು, ಬಿಜೆಪಿಯ ಹೊಸ ನಾಯಕರು ಮುಫ್ತಿ ಸರಕಾರದಲ್ಲಿ ಸ್ಥಾನ ಪಡೆಯಲಿದ್ದಾರೆ. ಜಮ್ಮು-ಕಾಶ್ಮೀರ ಸಂಪುಟದಲ್ಲಿ ಸಿಎಂ ಸೇರಿದಂತೆ ಗರಿಷ್ಠ 25 ಸದಸ್ಯರನ್ನು ಹೊಂದಲು ಅವಕಾಶವಿದ್ದು, ಪ್ರಸ್ತುತ 14 ಸ್ಥಾನಗಳನ್ನು ಪಿಡಿಪಿ ಹೊಂದಿದೆ. ಉಳಿದ 9 ಸ್ಥಾನಗಳನ್ನು ಬಿಜೆಪಿ ಸಚಿವರು ಅಲಂಕರಿಸಿದ್ದರು.

Comments are closed.