ರಾಷ್ಟ್ರೀಯ

ಪತ್ರಕರ್ತೆಯ ಕೆನ್ನೆ ಸವರಿದ ವಿವಾದ:ತಮಿಳುನಾಡು ರಾಜ್ಯಪಾಲರಿಂದ ಕ್ಷಮೆ

Pinterest LinkedIn Tumblr


ಚೆನ್ನೈ: ತಮಿಳು ನಾಡು ರಾಜ್ಯಪಾಲ ಭನ್ವಾರಿಲಾಲ್‌ ಪುರೋಹಿತ್‌ ಅವರು ಬಹಿರಂಗವಾಗಿ ಪತ್ರಕರ್ತೆಯೊಬ್ಬಳ ಕೆನ್ನೆ ಸವರಿ ವಿವಾದಕ್ಕೆ ಗುರಿಯಾಗಿದ್ದಾರೆ. ಘನ ಹುದ್ದೆಯಲ್ಲಿರುವ ಪುರೋಹಿತ್‌ ಅವರ ವರ್ತನೆಗೆ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ಬೇಷರತ್‌ ಕ್ಷಮೆ ಯಾಚಿಸಲು ಪಟ್ಟು ಹಿಡಿದಿದ್ದಾರೆ.

ಮಂಗಳವಾರ ರಾತ್ರಿ ಪುರೋಹಿತ್‌ ಅವರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸಿಲುಕಿದ್ದ ಪ್ರಾಧ್ಯಾಪಕನೋರ್ವನ ಹೇಳಿಕೆ ಕುರಿತು ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಕರೆದಿದ್ದು ಈ ವೇಳೆ ಘಟನೆ ನಡೆದಿದೆ. ಪ್ರಸಿದ್ದ ವಾರ ಪತ್ರಿಕೆಯ ವರದಿಗಾರ್ತಿ ಲಕ್ಷ್ಮೀ ಸುಬ್ರಮಣ್ಯನ್‌ ಅವರು ಪ್ರಶ್ನೆಯೊಂದನ್ನು ಕೇಳಿದ್ದು ಈ ವೇಳೆ ಉತ್ತರ ನೀಡುವುದನ್ನು ಬಿಟ್ಟು ಕೆನ್ನೆಯನ್ನು ಸವರಿದ್ದಾರೆ.ಈ ಬಗ್ಗೆ ಲಕ್ಷ್ಮೀ ಅವರು ಟ್ವೀಟರ್‌ನಲ್ಲಿ ಪ್ರಕಟಿಸಿ ಅಸಮಾಧಾನವನ್ನು ಹೊರ ಹಾಕಿದ್ದಾರು.

ಪುರೋಹಿತ್‌ ಅವರಿಗೆ ಸಾಮಾಜಿಕ ತಾಣದಲ್ಲಿ ಹಲವರು ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದು ಇದು ಗುಡ್‌ ಟಚ್‌, ದುರುದ್ದೇಶದಿಂದ ಕೂಡಿರಲ್ಲಿಲ್ಲ ಎಂದು ಅಭಿಪ್ರಾಯ ಸೂಚಿಸಿದ್ದಾರೆ.

ಮಧುರೈ ಕಾಮರಾಜ್‌ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳ ಜತೆ ಹಾಸಿಗೆ ಹಂಚಿಕೊಂಡಲ್ಲಿ, ಅಂಥ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಆರ್ಥಿಕ ಸವಲತ್ತು ನೀಡುವುದಾಗಿ ಮಹಿಳಾ ಪ್ರೊಫೆಸರ್‌ವೊಬ್ಬರು ಆಮಿಷವೊಡ್ಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿರುಧನಗರ್‌ನ ದೇವಾಂಗ ಆರ್ಟ್ಸ್ ಕಾಲೇಜ್‌ನಲ್ಲಿ ಗಣಿತ ಪ್ರೊಫೆಸರ್‌ ಆಗಿದ್ದ ನಿರ್ಮಲಾ ದೇವಿ (46) ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದರು.

ಬಂಧಿತೆ ನಿರ್ಮಲಾ ತಮ್ಮ ಮೇಲಿನ ಆರೋಪ ಸುಳ್ಳು.ತಮಗೆ ರಾಜ್ಯಪಾಲರ ಪರಿಚಯವಿದೆ ಎಂದು ಪೊಲೀಸರಿಗೆ ಹೇಳಿದ್ದು,ಅದಕ್ಕೆ ರಾಜ್ಯಪಾಲರೇ ಸ್ಪಷ್ಟನೆ ನೀಡಿ ದ್ದಾರೆ. ಆ ಮಹಿಳಾ ಪ್ರೊಫೆಸರ್‌ ತಮಗೆ ಪರಿಚಯವಿಲ್ಲ. ಅವರು ಯಾರೆಂದೇ ಗೊತ್ತಿಲ್ಲ ಎಂದು ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಸ್ಪಷ್ಟಪಡಿಸಿದ್ದಾರೆ.

ಕ್ಷಮೆ ಕೇಳಿದ ರಾಜ್ಯಪಾಲ

ತಮ್ಮ ನಡವಳಿಕೆ ವಿವಾದಕ್ಕೆ ಗುರಿ ಮಾಡಿದ ಕಾರಣಕ್ಕೆ 78 ರ ಹರೆಯದ ಪುರೋಹಿತ್‌ ಅವರು ಕ್ಷಮೆ ಯಾಚಿಸಿದ್ದಾರೆ. ‘ನೀವು ಉತ್ತಮ ಪ್ರಶ್ನೆ ಕೇಳಿದ್ದು ಹಾಗಾಗಿ ಅಭಿನಂದಿಸಲು ಹಾಗೆ ಮಾಡಿದ್ದೆ. ನೀವು ನನ್ನ ಮೊಮ್ಮಗಳ ಸಮಾನ ಎಂದಿದ್ದಾರೆ. ನಾನು 40 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ನನ್ನಿಂದ ನಿಮಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ’ ಎಂದು ಲಕ್ಷ್ಮೀ ಅವರಿಗೆ ಮೇಲ್‌ ಮಾಡಿದ್ದಾರೆ.

-ಉದಯವಾಣಿ

Comments are closed.