ರಾಷ್ಟ್ರೀಯ

‘ಕೇಸರಿ ಭಯೋತ್ಪಾದನೆ’ ಇಲ್ಲವೇ ಇಲ್ಲ; ನಾವೆಂದೂ ಹಾಗೆ ಹೇಳಿಲ್ಲ: ಕಾಂಗ್ರೆಸ್‌

Pinterest LinkedIn Tumblr


ಹೊಸದಿಲ್ಲಿ: ತನ್ನ ಮುಖಂಡರು ಯಾವತ್ತೂ ‘ಕೇಸರಿ ಭಯೋತ್ಪಾದನೆ’ ಎಂಬ ಪದ ಬಳಸಿಲ್ಲ ಎಂದು ಕಾಂಗ್ರೆಸ್‌ ಸೋಮವಾರ ಹೇಳಿಕೊಂಡಿದೆ. ಭಯೋತ್ಪಾದನೆಯನ್ನು ಯಾವುದೇ ಧರ್ಮಕ್ಕೆ ತಳುಕು ಹಾಕುವಂತಿಲ್ಲ ಎಂದೂ ಅದು ಹೇಳಿದೆ.

ಬಹುಸಂಖ್ಯಾತ ಸಮುದಾಯಕ್ಕೆ ಮಸಿ ಬಳಿಯಲು ಕಾಂಗ್ರೆಸ್‌ ‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಸೃಷ್ಟಿಸಿದೆ ಎಂದು ಬಿಜೆಪಿ ಆರೋಪಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಸ್ಪಷ್ಟೀಕರಣ ನೀಡಿದೆ.

‘ರಾಹುಲ್‌ ಗಾಂಧಿ ಅಥವಾ ಬೇರಾವುದೇ ಕಾಂಗ್ರೆಸ್‌ ನಾಯಕರು ‘ಕೇಸರಿ ಆತಂಕವಾದ’ ಎಂಬ ಪದ ಬಳಸಿದ ವೀಡಿಯೋ ಅಥವಾ ಧ್ವನಿ ಸುರುಳಿ ಇದ್ದರೆ ತೋರಿಸಿ. ಕೇಸರಿ ಭಯೋತ್ಪಾದನೆ ಎಂಬುದು ಇಲ್ಲವೇ ಇಲ್ಲ’ ಎಂದು ಎಐಸಿಸಿ ವಕ್ತಾರ ಪಿ.ಎಲ್‌ ಪುನಿಯಾ ಪ್ರತಿಕ್ರಿಯಿಸಿದ್ದಾರೆ.

ಎನ್‌ಐಎ ಕಾರ್ಯವೈಖರಿಯನ್ನು ಪ್ರಶ್ನಿಸಿದ ರಾಜ್ಯಸಭೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್‌, ‘ನಾಲ್ಕು ವರ್ಷಗಳ ಹಿಂದೆ ಹೊಸ ಸರಕಾರ ರಚನೆಯಾದ ಬಳಿಕ ಸಾಲು ಸಾಲಾಗಿ ಎಲ್ಲ ಪ್ರಕರಣಗಳಲ್ಲೂ ಆರೋಪಿಗಳ ಖುಲಾಸೆ ಆಗುತ್ತಿದೆ. ಹೀಗಾದರೆ ಇಂತಹ ತನಿಖಾ ಸಂಸ್ಥೆಗಳ ಬಗ್ಗೆ ಜನತೆ ವಿಶ್ವಾಸ ಕಳೆದುಕೊಳ್ಳುತ್ತಾರೆ’ ಎಂದು ಟಿವಿ ಚಾನೆಲ್‌ ಒಂದರ ಜತೆ ಮಾತನಾಡುತ್ತ ಆಜಾದ್‌ ಟೀಕಿಸಿದ್ದರು.

ಸ್ವಾಮಿ ಅಸೀಮಾನಂದರ ಖುಲಾಸೆ ಸೇರಿದಂತೆ ಹಲವು ದೋಷಮುಕ್ತಿಗಳ ಬಗ್ಗೆ ಪ್ರತಿಕ್ರಿಯಿಸುತ್ತ ಕಾಂಗ್ರೆಸ್ ವಕ್ತಾರರು, ‘ಭಯೋತ್ಪಾದನೆ ಜತೆ ಯಾವುದೇ ಧರ್ಮ ಅಥವಾ ಸಮುದಾಯವನ್ನು ತಳುಕು ಹಾಕುವಂತಿಲ್ಲ’ ಎಂದು ನುಡಿದರು.

Comments are closed.