ರಾಷ್ಟ್ರೀಯ

ಕೇರಳ: ಗ್ರಾಮಸ್ಥರ ದಾಹ ಇಂಗಿಸಿದ ಆಧುನಿಕ ಭಗೀರಥ, ನೀರಿನ ಯೋಜನೆ ರೂಪಿಸಿದ ಸಾಫ್ಟ್‌ವೇರ್‌ ಎಂಜಿನಿಯರ್‌

Pinterest LinkedIn Tumblr


ಕೊಟ್ಟಾಯಂ: ದೇಶದಲ್ಲಿ ಹೆಚ್ಚಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸರಕಾರಗಳಿಗೆ ತ್ರಾಸದಾಯಕ ವಿಷಯವಾಗಿದೆ.

ಆದರೆ ಕೇರಳದ ಸಾಫ್ಟ್‌ವೇರ್‌ ಎಂಜನಿಯರ್‌ವೊಬ್ಬರು ಈ ಸಮಸ್ಯೆಗೆ ತಮ್ಮದೇ ರೀತಿಯಲ್ಲಿ ಪರಿಹಾರ ಕಂಡುಹಿಡಿದಿದ್ದಾರೆ.

ಕೇರಳದ ಕೊಟ್ಟಾಯಂ ಜಿಲ್ಲೆಯ ಪಳ್ಳಿಕಾಥೋಡ್‌ ಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಅಳವಡಿಸಲಾಗಿದೆ. ಗ್ರಾಮದ ಜನರ ದಾಹವನ್ನು ಇಂಗಿಸಿದ ಭಗೀರಥ ಅಜಯ್‌ ಕುಮಾರ್‌ ಎಂಬ ಎಂಜಿನಿಯರ್‌.

ಗ್ರಾಮದಲ್ಲಿ 5 ಮೀಟರ್‌ ವ್ಯಾಸದ ಬಾವಿಯೊಂದನ್ನು ತೋಡಿ ಅದಕ್ಕೆ ವಿಶೇಷವಾಗಿ ರೂಪಿಸಿದ ಪಂಪ್‌ಸೆಟ್‌ ಅಳವಡಿಸಿಕೊಂಡಿದ್ದಾರೆ ಅಜಯ್‌ ಕುಮಾರ್‌. ಪಕ್ಕದಲ್ಲಿಯೇ ಪಂಪ್‌ಹೌಸ್‌ವೊಂದನ್ನು ನಿರ್ಮಿಸಿದ್ದಾರೆ.

ಪಂಪ್‌ಹೌಸ್‌ನಲ್ಲಿಯೇ ಮೊಬೈಲ್‌ ಫೋನ್‌ವೊಂದನ್ನು ಇಟ್ಟಿದ್ದು ಅದನ್ನು ರಿಮೋಟ್‌ ಕಂಟ್ರೋಲ್‌ ಮಾದರಿಯಲ್ಲಿ ಬಳಸಲಾಗುತ್ತಿದೆ. ಸೂಚನೆಗಳನ್ನು ಇದರ ಮೂಲಕವೇ ಪಂಪ್‌ಗೆ ರವಾನಿಸಿ ನೀರು ಪೂರೈಕೆ ಮಾಡಲಾಗುತ್ತಿದೆ.

ಗ್ರಾಮದಲ್ಲಿರುವ 40ಕ್ಕೂ ಹೆಚ್ಚು ಕುಟುಂಬಗಳು ಈಗ ನೀರಿನ ಸಮಸ್ಯೆಯಿಂದ ಪರಿಹಾರ ಕಂಡುಕೊಂಡಿದ್ದಾರೆ. ಈ ಯೋಜನೆಗೆ ಬೇಕಾಗಿರುವ ಸಂಪೂರ್ಣ ವೆಚ್ಚವನ್ನು ಗ್ರಾಮಸ್ಥರೇ ಬರಿಸಿದ್ದು, ನೀರನ್ನು ಯಾವುದೇ ತೆರಿಗೆ ಕಟ್ಟದೇ ಬಳಸಿಕೊಳ್ಳುತ್ತಿದ್ದಾರೆ.

ಇವರಿಗೆ ಈಗ ಹೆಚ್ಚುವರಿಯಾಗಿ ಬೀಳುತ್ತಿರುವುದು ತಿಂಗಳ ವಿದ್ಯುತ್ ಬಿಲ್‌ ಅಷ್ಟೇ.

ಗ್ರಾಮದ ಚಿತ್ರಕೂಟ ಶ್ರೀಧರನ್‌ ಎಂಬುವರು ಬಾವಿ ತೋಡಲು ಹಾಗೂ ಪಂಪ್ ಹೌಸ್‌ ನಿರ್ಮಿಸಲು ನಿವೇಶನ ಬಿಟ್ಟುಕೊಟ್ಟಿದ್ದಾರೆ.

ಅಜಯ್‌ ಕುಮಾರ್ ಅವರ ಈ ಯೋಜನೆ ಸರಕಾರಗಳಿಗೂ ಮಾದರಿಯಾಗಿದೆ. ಇದನ್ನು ಬಳಸಿಕೊಂಡರೆ ಹಲವು ಗ್ರಾಮಗಳ ದಾಹ ಇಂಗಿಸಬಹುದಾಗಿದೆ.

Comments are closed.