ರಾಷ್ಟ್ರೀಯ

ಎಂಜಿನ್‌ ಇಲ್ಲದೆ 13 ಕಿ.ಮೀ ಓಡಿದ ಎಕ್ಸ್‌ಪ್ರೆಸ್‌ ರೈಲು: 7 ಮಂದಿ ಅಮಾನತು

Pinterest LinkedIn Tumblr


ಭುವನೇಶ್ವರ: ಅಹಮದಾಬಾದ್‌-ಪುರಿ ಎಕ್ಸ್‌ಪ್ರೆಸ್‌ ರೈಲು ಶನಿವಾರ ರಾತ್ರಿ ಎಂಜಿನ್‌ ರಹಿತವಾಗಿ 13 ಕಿ.ಮೀ ದೂರ ಸಂಚರಿಸಿದ ಘಟನೆ ನಡೆದಿದ್ದು, ಸಂಭಾವ್ಯ ಅನಾಹುತವೊಂದು ತಪ್ಪಿದೆ.

ಕರ್ತವ್ಯಲೋಪದ ಆರೋಪದಲ್ಲಿ ಈ ಘಟನೆಗೆ ಕಾರಣರಾದ 7 ಮಂದಿ ಸಿಬ್ಬಂದಿಯನ್ನು ರೈಲ್ವೆ ಇಲಾಖೆ ಅಮಾನತು ಮಾಡಿದೆ.

22 ಕೋಚ್‌ಗಳ ಈ ರೈಲು ಬಲಾಂಗೀರ್ ಜಿಲ್ಲೆಯ ತಿತ್ಲಾಘರ್‌ ನಿಲ್ದಾಣದಿಂದ ಕಾಳಹಂಡಿ ಜಿಲ್ಲೆಯ ಕೆಸಿಂಗಾ ನಿಲ್ದಾಣದ ವರೆಗೆ ಎಂಜಿನ್‌ ರಹಿತವಾಗಿ ಸಂಚರಿಸಿತ್ತು.

ರೈಲು ಚಾಲಕ ರಾಯಪುರದ ಎಸ್‌. ವೆಂಕಟ್‌ ರಾವ್‌, ಸಹಾಯಕ ರೈಲು ಚಾಲಕ ಸುಶಾಂತ್ ಸಿಂಗ್, ಕ್ಯಾರೇಜ್‌ ಮತ್ತು ವ್ಯಾಗನ್‌ ವಿಭಾಗದ ಸಿಬ್ಬಂದಿ ಜಿ.ಎಸ್‌ ಪಾಂಡಾ, ಲಖ ಕಸ್ಪೇಟಾ ಮತ್ತು ಬಿ.ಪಿ ಸಿಂಗ್‌ ಅವರನ್ನು ಪೂರ್ವ ಕರಾವಳಿ ರೈಲ್ವೆ ಅಮಾನತು ಮಾಡಿದೆ.

ಈ ಘಟನೆ ಹಿನ್ನೆಲೆಯಲ್ಲಿ, ದೇಶಾದ್ಯಂತ ಒಂದು ತಿಂಗಳ ಕಾಲ ಸುರಕ್ಷತಾ ಅಭಿಯಾನ ನಡೆಸಲು ರೈಲ್ವೇ ಮಂಡಳಿ ಆದೇಶಿಸಿದೆ.

ತಿತ್ಲಾಘರ್‌ ನಿಲ್ದಾಣದಲ್ಲಿ ರೈಲಿನಿಂದ ಎಂಜಿನ್‌ ಅನ್ನು ಪ್ರತ್ಯೇಕಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಜಾಗೃತ ರೈಲ್ವೇ ಸಿಬ್ಬಂದಿಗಳು ಹಳಿಯಲ್ಲಿ ದೊಡ್ಡ ಕಲ್ಲುಗಳನ್ನಿಟ್ಟು ಎಂಜಿನ್‌ ಇಲ್ಲದೆ ಓಡುತ್ತಿದ್ದ ರೈಲನ್ನು ತಡೆದು ನಿಲ್ಲಿಸಿ ಸಂಭಾವ್ಯ ಅನಾಹುತ ತಪ್ಪಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕರ್ತವ್ಯದಲ್ಲಿದ್ದ ಸಿಬ್ಬಂದಿ ರೈಲಿನ ಚಕ್ರಗಳಿಗೆ ಸ್ಕಿಡ್‌ ಬ್ರೇಕ್‌ ಹಾಕಿರದ ಕಾರಣ ರೈಲು ಉರುಳಿಕೊಂಡು ಮುಂದಕ್ಕೆ ಹೋಯಿತು. ನಿಯಮಗಳ ಪ್ರಕಾರ, ರೈಲು ನಿಲುಗಡೆಯಾದಾಗ ಸ್ಕಿಡ್‌ ಬ್ರೇಕ್‌ಗಳನ್ನು ಉಪಯೋಗಿಸಬೇಕು.

‘ಒಂದು ತುದಿಯಿಂದ ಎಂಜಿನ್‌ ಅನ್ನು ಪ್ರತ್ಯೇಕಿಸಿದಾಗ, ಇನ್ನೊಂದು ತುದಿಯಲ್ಲಿ ಚಕ್ರಗಳಿಗೆ ಸ್ಕಿಡ್‌ ಬ್ರೇಕ್‌ಗಳನ್ನು ಹಾಕಿರಬೇಕು. ಈ ಪ್ರಕರಣದಲ್ಲಿ ಸ್ಕಿಡ್ ಬ್ರೇಕ್‌ಗಳನ್ನು ಸರಿಯಾಗಿ ಅಳವಡಿಸಿರಲಿಲ್ಲ. ವಾಸ್ತವದಲ್ಲಿ ನಡೆದಿದ್ದೇನು ಎಂಬುದು ಇನ್ನಷ್ಟು ತನಿಖೆಯಿಂದ ಗೊತ್ತಾಗಲಿದೆ’ ಎಂದು ರೈಲ್ವೇ ವಕ್ತಾರ ತಿಳಿಸಿದರು.

Comments are closed.