ಕರ್ನಾಟಕ

ಬ್ಯಾನರ್‌ ತೆಗೆಯದಿದ್ದರೆ ಅಧಿಕಾರಿಗಳೇ ಹೊಣೆ

Pinterest LinkedIn Tumblr


ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಚುನಾವಣೆ, ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಯಾವುದೇ ಬ್ಯಾನರ್‌, ಪೋಸ್ಟರ್‌, ಫ್ಲೆಕ್ಸ್‌ಗಳು ಕಂಡುಬಂದಲ್ಲಿ ಕಂದಾಯ ಅಧಿಕಾರಿಗಳನ್ನು ಅದಕ್ಕೆ ಹೊಣೆಯಾಗಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಎಚ್ಚರಿಕೆ ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಸ್ವಾಗತಿಸಲು ರಾತ್ರೋರಾತ್ರಿ ನಗರದ ವಿವಿಧೆಡೆ ಅಳವಡಿಸಲಾಗಿರುವ ಫ್ಲೆಕ್ಸ್‌ಗಳನ್ನು ಕಂಡು ಅಸಮಧಾನಗೊಂಡಿರುವ ಅವರು, ಪಾಲಿಕೆಯ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಯಾವುದೇ ಬ್ಯಾನರ್‌ ಮತ್ತು ಪೋಸ್ಟರ್‌ ಕಂಡುಬಂದರೆ ಅಲ್ಲಿನ ಕಂದಾಯ ವಿಭಾಗದ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುವುದು ಎಂದು ಸುತ್ತೋಲೆ ಹೊರಡಿಸಿದ್ದಾರೆ.

ವಿಧಾನಸಭಾ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗದಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಪ್ರಚಾರದ ಸಂದರ್ಭದಲ್ಲಿ ಬಂಟಿಂಗ್ಸ್‌, ಬ್ಯಾನರ್‌ ಬಳಸದಂತೆ ಸೂಚನೆ ನೀಡಲಾಗಿದೆ. ಆ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಹಾಗೂ ಪಕ್ಷದ ಅಭ್ಯರ್ಥಿಗಳು ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗುವಂತೆ ಚುನಾವಣೆಗೆ ಸಂಬಂಧಿಸಿದ ಗೋಡೆ ಬರಹ ಬರೆಯುವುದು, ಪೋಸ್ಟರ್‌ ಅಂಟಿಸುವುದು, ಜಾಹಿರಾತು ಫ‌ಲಕ ಪ್ರದರ್ಶಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಹುಲ್‌ ಬ್ಯಾನರ್‌ ತೆರವು: ನಗರದಲ್ಲಿ ಭಾನುವಾರ ನಡೆಯುವ ಜನಾರ್ಶೀವಾದ ಯಾತ್ರೆ ಹಿನ್ನೆಲೆಯಲ್ಲಿ ನಗರದ ಏರ್‌ಪೋರ್ಟ್‌ ರಸ್ತೆ ಹಾಗೂ ಕಾಪೊರೇಷನ್‌ ವೃತ್ತದಿಂದ ಅರಮನೆ ರಸ್ತೆಯಲ್ಲಿ ಕಾಂಗ್ರೆಸ್‌ ನಾಯಕರನ್ನು ಒಳಗೊಂಡ ರಾಹುಲ್‌ ಗಾಂಧಿ ಫೋಟೋಗಳನ್ನು ಹಾಕಲಾಗಿದ್ದ ಬ್ಯಾನರ್‌ಗಳನ್ನು ಚುನಾವಣಾಧಿಕಾರಿಗಳು ಶನಿವಾರ ತೆರವುಗೊಳಿಸಿದರು.

ರಾಹುಲ್‌ ಗಾಂಧಿಗೆ ಸ್ವಾಗತ ಕೋರುವ ಫ‌ಲಕಗಳನ್ನು ತೆರವು ಮಾಡಿದ್ದಾರಲ್ಲದೆ, ಫ್ಲೆಕ್ಸ್‌, ಹೋರ್ಡಿಂಗ್‌ಗಳಲ್ಲಿ ಜಾಹೀರಾತು ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವ ಆಯೋಗವು ಈಗಾಗಲೇ ಎಫ್ಐಆರ್‌ಗಳನ್ನು ದಾಖಲಿಸಿದೆ.

-ಉದಯವಾಣಿ

Comments are closed.