ರಾಷ್ಟ್ರೀಯ

ಬಿಜೆಪಿ ವಿರುದ್ಧ ಉತ್ತರ ಪ್ರದೇಶದಲ್ಲಿ ಒಗ್ಗೂಡಲಿವೆ ಆನೆ, ಸೈಕಲ್‌, ಹಸ್ತ

Pinterest LinkedIn Tumblr


ಹೊಸದಿಲ್ಲಿ: 1978ರ ಸಂದರ್ಭದಲ್ಲಿ ಕಾಂಗ್ರೆಸ್‌ ಇಬ್ಭಾಗವಾದ ನಂತರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ (ಐ) ಪಕ್ಷಕ್ಕೆ ಹೊಸ ಚಿಹ್ನೆಯ ಹುಡುಕಾಟ ನಡೆದಿತ್ತು. ಈ ವೇಳೆ ಅವರ ಮುಂದೆ ಹಸ್ತ, ಆನೆ ಮತ್ತು ಬೈಸಿಕಲ್‌ ಮೂರು ಆಯ್ಕೆಗಳಿದ್ದವು. ಅವರು ಕೊನೆಗೆ ಒಪ್ಪಿದ್ದು ಹಸ್ತವನ್ನು. ಇದಾಗಿ 40 ವರ್ಷಗಳು ಸಂದಿದ್ದು, 2019ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಓಟಕ್ಕೆ ಬ್ರೇಕ್‌ ಹಾಕಲು ಹಸ್ತ, ಬೈಸಿಕಲ್‌, ಆನೆ ಮೂರೂ ಒಂದಾಗುವ ಸಾಧ್ಯತೆಗಳಿವೆ!

ಹಸ್ತ ಕಾಂಗ್ರೆಸ್‌ ಚಿಹ್ನೆಯಾಗಿದ್ದರೆ, ಬೈಸಿಕಲ್‌ ಮತ್ತು ಆನೆ ಕ್ರಮವಾಗಿ ಎಸ್ಪಿ, ಬಿಎಸ್ಪಿ ಚಿಹ್ನೆಗಳಾಗಿವೆ. ಒಂದು ಕಾಲದಲ್ಲಿ ಇಂದಿರಾ ತಮ್ಮ ಪಕ್ಷಕ್ಕೆ ಆನೆ, ಬೈಸಿಕಲ್‌ ಬಿಟ್ಟು ಹಸ್ತವನ್ನೇ ಚಿಹ್ನೆಯಾಗಿಸಿಕೊಂಡ ಸೋಜಿಗದ ಸಂಗತಿ ಪತ್ರಕರ್ತ ರಶೀದ್‌ ಕಿದ್ವಾಯಿ ಅವರ ‘ಬ್ಯಾಲೆಟ್‌-ಟೆನ್‌ ಎಪಿಸೋಡ್ಸ್‌ ದಟ್‌ ಹ್ಯಾವ್‌ ಶೇಪ್ಡ್‌ ಇಂಡಿಯಾಸ್‌ ಡೆಮಾಕ್ರಸಿ’ ಪುಸ್ತಕದಲ್ಲಿ ದಾಖಲಾಗಿದೆ.

ಆ ಸಂದರ್ಭದಲ್ಲಿ ಬೂಟಾ ಸಿಂಗ್‌ ಎಐಸಿಸಿ ಪ್ರಧಾನ ಕಾರ‍್ಯದರ್ಶಿಯಾಗಿದ್ದರು. ಕಾಂಗ್ರೆಸ್‌(ಐ)ಗೆ ಹೊಸ ಚಿಹ್ನೆಯ ಅಗತ್ಯವಿತ್ತು. ಚುನಾವಣಾ ಆಯೋಗ ಹಸ್ತ, ಬೈಸಿಕಲ್‌, ಆನೆ ಆಯ್ಕೆಗಳನ್ನು ಮುಂದಿಟ್ಟಿತ್ತು. ಈ ವಿಚಾರವನ್ನು ಬೂಟಾ ಸಿಂಗ್‌ ಇಂದಿರಾ ಬಳಿ ಹೇಳಿದಾಗ ಅವರು ಪಿ.ವಿ. ನರಸಿಂಹರಾವ್‌ ಜತೆ ವಿಜಯವಾಡದಲ್ಲಿದ್ದರು. ದೂರವಾಣಿಯಲ್ಲಿ ಬೂಟಾ ಸಿಂಗ್‌ ಹಾಥ್‌(ಹಸ್ತ) ಮತ್ತು ಹಾಥಿ (ಆನೆ) ಪದವನ್ನು ಸರಿಯಾಗಿ ಉಚ್ಛರಿಸದ ಕಾರಣ ಇಂದಿರಾ ಗೊಂದಲಕ್ಕೊಳಗಾದರು. ಕೂಡಲೇ ದೂರವಾಣಿಯನ್ನು ಬಹುಭಾಷಾ ಪ್ರವೀಣ ಪಿವಿಎನ್‌ ಕೈಗೆ ಕೊಟ್ಟರು. ಆಗ ಅವರು ”ನೀವು (ಬೂಟಾ) ಹೇಳುತ್ತಿರುವುದು ಹಾಥ್‌, ಪಂಜಾ ಅಲ್ಲವೇ,” ಎಂದು ಎರೆಡೆರಡು ಬಾರಿ ಕೇಳಿದರು. ಬೂಟಾ ಸಿಂಗ್‌, ಹೌದು ಪಂಜಾ ಎಂದು ಹೇಳುತ್ತಿದ್ದಂತೆಯೇ ಇಂದಿರಾ ಓಕೆ ಅಂದುಬಿಟ್ಟರು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

Comments are closed.