ರಾಷ್ಟ್ರೀಯ

ಒಟ್ಟಿಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ಎಲ್ಲರನ್ನು ಚಕಿತಗೊಳಿಸಿದ ತಾಯಿ, ಮಗ !

Pinterest LinkedIn Tumblr

ಲೂಧಿಯಾನ: ಕಲಿಯುವುದಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತಾಯಿ ಮತ್ತು ಮಗ ಒಟ್ಟಿಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದ ಅಪರೂಪದ ಪ್ರಸಂಗವೊಂದು ಪಂಜಾಬಿನ ಲೂಧಿಯಾನದಲ್ಲಿ ನಡೆದಿದೆ.

44 ವರ್ಷದ ರಜನಿ ಬಾಳ ಎಂಬುವವರು 1989 ರಲ್ಲಿ 9ನೇ ತರಗತಿಯನ್ನು ಪೂರೈಸಿದ್ದರು. ಆದರೆ, ಕುಟುಂಬದ ಪರಿಸ್ಥಿತಿಯಿಂದಾಗಿ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿ ಮದುವೆಯಾಗಿ ಕೌಟುಂಬಿಕ ಜೀವನ ನಡೆಸುತ್ತಿದ್ದರು.

ಮೂರು ಮಕ್ಕಳನ್ನು ಹೊಂದಿರುವ ರಜನಿ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ವಾರ್ಡ್​ ಅಟೆಂಡರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಸ್​ಎಸ್​ಎಲ್​ಸಿ ಪ್ರಾಮುಖ್ಯತೆ ಅರಿತ ಅವರು ಪರೀಕ್ಷೆ ಬರೆಯಲು ನಿರ್ಧರಿಸಿ, ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ ತಮ್ಮ ಮಗನೊಂದಿಗೆ ಪ್ರತಿನಿತ್ಯ ತರಗತಿ ಹೋಗಿ ಅಧ್ಯಯನ ಮಾಡಿ ಪರೀಕ್ಷೆಗೆ ತಯಾರಾಗಿ ಪರೀಕ್ಷೆ ಎದುರಿಸಿದ್ದಾರೆ.

ಪತಿ, ಅತ್ತೆ ಹಾಗೂ ನನ್ನ ಮಕ್ಕಳು ಪರೀಕ್ಷೆ ಬರೆಯುವಂತೆ ನನಗೆ ಅನೇಕ ಬಾರಿ ಹೇಳಿದ್ದರು. ಅಲ್ಲದೆ, ನನಗೆ ಬೆಂಬಲವಾಗಿ ನಿಂತರು. ಪ್ರಾರಂಭದಲ್ಲಿ ನನಗೆ ಭಯವಾದರೂ ಕೂಡ ಎಲ್ಲರ ಬೆಂಬಲದಿಂದ ಧೈರ್ಯವಾಗಿ ಪರೀಕ್ಷೆ ಎದುರಿಸಲು ನೆರವಾಯಿತು ಎಂದು ರಜನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

17 ವರ್ಷಗಳ ನಂತರ ನನ್ನ ಪತ್ನಿ ಪರೀಕ್ಷೆಯನ್ನು ಎದುರಿಸಿದ್ದು, ಅದಕ್ಕಾಗಿ ಸಾಕಷ್ಟು ಪರಿಶ್ರಮ ಹಾಕಿದ್ದಾಳೆ. ಬೆಳಗ್ಗೆ ಬೇಗ ಎದ್ದು ಅಧ್ಯಯನ ಮಾಡಿ ನಂತರ ಶಾಲೆಗೆ ಹೋಗಿ ಬಳಿಕ ಅಲ್ಲಿಂದ ಟ್ಯೂಷನ್​ ಮುಗಿಸಿ ಬರುತ್ತಿದ್ದಳು. ಈ ಪರಿಶ್ರಮ ಅವಳಿಗೆ ಫಲ ನೀಡಲಿದೆ ಎಂದು ಪತಿ ರಾಜಕುಮಾರ್​ ಸತಿ ತಿಳಿಸಿದ್ದಾರೆ.

ರಜನಿ ಅವರ ಶಿಕ್ಷಣದ ಬಗ್ಗೆ ಮಾತನಾಡಿರುವ ಲಜವಾಂತಿ ಸೀನಿಯರ್​ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಪವನ್​ ಗೌರ್ ತಾಯಿ ಮತ್ತು ಮಗ ಒಟ್ಟಿಗೆ ಪರೀಕ್ಷೆ ಎದುರಿಸಿರುವುದು ಸಮಾಜಕ್ಕೆ ಧನಾತ್ಮಕ ಸಂದೇಶವನ್ನು ಸಾರುತ್ತದೆ ಎಂದು ಹೇಳಿದ್ದಾರೆ.

Comments are closed.