ರಾಷ್ಟ್ರೀಯ

ಬಿಎಸ್‌ವೈ ಸರಕಾರ ಬಗ್ಗೆ ಅಮಿತ್‌ ಶಾ ಹೇಳಿಕೆ: ಬಿಜೆಪಿ-ಕಾಂಗ್ರೆಸ್‌ ಟ್ವೀಟ್‌ ವಾರ್

Pinterest LinkedIn Tumblr


ಹೊಸದಿಲ್ಲಿ: ಬಿ.ಎಸ್‌. ಯಡಿಯೂರಪ್ಪ ಸರಕಾರ ಅತ್ಯಂತ ಭ್ರಷ್ಟ ಸರಕಾರ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಎಡವಟ್ಟು ಹೇಳಿಕೆ ನೀಡಿರುವುದು ಈಗ ಟ್ವಿಟರ್‌ ಲೋಕದಲ್ಲಿ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಟ್ವಿಟರ್‌ ಮೂಲಕವೇ ಸಮರ ಸಾರಿದ್ದಾರೆ. ಅಮಿತ್‌ ಹೇಳಿಕೆಯ ವಿಡಿಯೋವನ್ನೇ ಇಟ್ಟುಕೊಂಡು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.

ಅಮಿತ್‌ ಶಾ ದಾವಣಗೆರೆಯಲ್ಲಿ ಮಾತನಾಡಿದ 9 ಸೆಕೆಂಡುಗಳ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಾಕಿರುವ ರಾಹುಲ್‌ ಗಾಂಧಿ, ಇದನ್ನು ನಾವು ಚುನಾವಣೆ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಟ್ವೀಟ್‌ ಮಾಡಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌, ರಾಹುಲ್‌ ಗಾಂಧಿಯ ಎಡವಟ್ಟುಗಳ ಬಗ್ಗೆ ಸಂದೇಶ ನೀಡಿದ್ದಾರೆ.

ರಾಹುಲ್‌ ಗಾಂಧಿಯವರ ಎಡವಟ್ಟುಗಳು ನಮ್ಮಲ್ಲಿ ಸಾಕಷ್ಟು ಇದೆ. ಕಾಂಗ್ರೆಸ್‌ ಕೇವಲ 9 ಸೆಕೆಂಡ್‌ ವಿಡಿಯೋ ಹಿಡಿದುಕೊಂಡು ಚುನಾವಣೆ ಪ್ರಚಾರಕ್ಕೆ ಸಜ್ಜಾಗುತ್ತಿದೆ. ಅವರಿಗೆ ಒಳ್ಳೆಯದಾಗಲಿ, ನಮ್ಮಲ್ಲಿ ರಾಹುಲ್‌ ಎಡವಟ್ಟುಗಳ ವೀಡಿಯೊ ಟೆರಾ ಬೈಟ್‌ಗಳ ಲೆಕ್ಕದಲ್ಲಿದೆ ಎಂದು ಟ್ವೀಟಿಸಿದ್ದಾರೆ.

Comments are closed.