ರಾಷ್ಟ್ರೀಯ

ವಯಸ್ಕ ಜೋಡಿ ಮದುವೆಯಲ್ಲಿ ಖಾಪ್‌ ಹಸ್ತಕ್ಷೇಪ ಕಾನೂನು ಬಾಹಿರ: ಸುಪ್ರೀಂ

Pinterest LinkedIn Tumblr


ಹೊಸದಿಲ್ಲಿ: ‘ಪ್ರಾಯ ಪ್ರಬುದ್ಧ ಜೋಡಿ ತಮ್ಮ ಇಚ್ಛೆಯಿಂದ ಮದುವೆಯಾಗುವುದಕ್ಕೆ ಖಾಪ್‌ ಪಂಚಾಯತ್‌ಗಳು ಅಡ್ಡಿ ಬರುವುದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿರುತ್ತದೆ” ಎಂದು ಸುಪ್ರೀಂ ಕೋರ್ಟ್‌ ಇಂದು ಮಂಗಳವಾರ ಮಹತ್ವದ ತೀರ್ಪು ನೀಡಿದೆ.

ಸಾಮಾನ್ಯವಾಗಿ ಜೀವ ಬೆದರಿಕೆ, ಬಹಿಷ್ಕಾರ, ದೈಹಿಕ ದಂಡನೆ, ಮರ್ಯಾದಾ ಹತ್ಯೆಯೇ ಮೊದಲಾದ ಅಮಾನುಷ ಶಿಕ್ಷೆಗಳಿಗೆ ಗುರಿಯಾಗುವ ಅಂತರ್‌ ಜಾತೀಯ ಅಥವಾ ಅಂತರ್‌ಧರ್ಮೀಯ ಜೋಡಿಗಳಿಗೆ ಸುಪ್ರೀಂ ಕೋರ್ಟಿನ ಈ ತೀರ್ಪಿನಿಂದ ಭಾರೀ ರಿಲೀಫ್ ಸಿಕ್ಕಂತಾಗಿದೆ.

ಅಂತರ್‌ ಧರ್ಮೀಯ ಮತ್ತು ಅಂತರ್‌ ಜಾತೀಯ ಪ್ರಾಯ ಪ್ರಬುದ್ಧ ಮತ್ತು ಪರಸ್ಪರ ಒಪ್ಪಿಗೆಯ ಮೇಲೆ ಮದುವೆಯಾಗುವ ಜೋಡಿಗಳ ವಿವಾಹದಲ್ಲಿ ಖಾಪ್‌ ಪಂಚಾಯತ್‌ಗಳು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ನಡೆಸಕೂಡದೆಂಬ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ಹಾಕಿಕೊಟ್ಟಿರುವ ಸುಪ್ರೀಂ ಕೋರ್ಟ್‌, ಸಂಸತ್ತಿನಲ್ಲಿ ಈ ಬಗ್ಗೆ ಕಾನೂನು ರೂಪಣೆಯಾಗುವ ತನಕ ಈ ಸೂತ್ರಗಳು ಜಾರಿಯಲ್ಲಿರುತ್ತವೆ ಎಂದು ಹೇಳಿದೆ.

ಸರ್ವೋಚ್ಚ ನ್ಯಾಯಾಲಯದ ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್‌ಕರ್‌ ಮತ್ತು ಡಿ ವೈ ಚಂದ್ರಚೂಡ್‌ ಅವರನ್ನು ಒಳಗೊಂಡ ಪೀಠವ ಈ ಮಹತ್ವದ ತೀರ್ಪನ್ನು ಇಂದು ಮಂಗಳವಾರ ನೀಡಿತು.

ಅಂತರ್‌ ಜಾತೀಯ ಅಥವಾ ಅಂತರ್‌ ಧರ್ಮೀಯ ಜೋಡಿಗಳು ವಿವಾಹವಾದಾಗ ಮರ್ಯಾದಾ ಹತ್ಯೆಗೆ ಗುರಿಯಾಗುವುದನ್ನು ತಪ್ಪಿಸುವ ಸಲುವಾಗಿ ಅವರಿಗೆ ಸೂಕ್ತ ರಕ್ಷಣೆಯನ್ನು ದೊರಕಿಸಲು ಎನ್‌ಜಿಓ ಶಕ್ತಿ ವಾಹಿನಿ 2010ರಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಲೇರಿತ್ತು. ಇಂದು ಸುಪ್ರೀಂ ಕೋರ್ಟ್‌ ಈ ವಿಷಯದಲ್ಲಿ ಮಹತ್ವದ ತೀರ್ಪು ನೀಡಿತು.

-ಉದಯವಾಣಿ

Comments are closed.