ರಾಷ್ಟ್ರೀಯ

ಕೌಟುಂಬಿಕ ಕೋರ್ಟ್‌ ತಡೆಯಿದ್ದರೂ ಎಂಪಿ ಶಶಿಕಲಾ ಪುಷ್ಪ ವಿವಾಹ

Pinterest LinkedIn Tumblr


ಮಧುರೆ: ಈ ಹಿಂದಿನ ಮದುವೆ ಇನ್ನೂ ಊರ್ಜಿತದಲ್ಲಿರುವುದರಿಂದ ಮರು ಮದುವೆ ಸಾಧ್ಯವಿಲ್ಲ ಎಂದು ಮಧುರೆ ಕೌಟುಂಬಿಕ ಕೋರ್ಟ್‌ ಆದೇಶ ನೀಡಿದ್ದರೂ ರಾಜ್ಯಸಭೆ ಸದಸ್ಯೆ ಶಶಿಕಲಾ ಪುಷ್ಪ ಮತ್ತು ಡಾ. ರಾಮಸ್ವಾಮಿ ದಿಲ್ಲಿಯಲ್ಲಿ ವಿವಾಹವಾಗಿದ್ದಾರೆ.

ವಿಲ್ಲುಪುರದ ಟಿ. ಸತ್ಯಪ್ರಿಯ ಎಂಬವರು ರಾಮಸ್ವಾಮಿ ವಿರುದ್ಧ ಕೌಟುಂಬಿಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ರಾಮಸ್ವಾಮಿ ಮದುವೆಯಾಗದಂತೆ ತಡೆ ನೀಡುವಂತೆ ಕೋರಿದ್ದರು. ರಾಮಸ್ವಾಮಿ ಅವರು ಕಾನೂನು ಪ್ರಕಾರ ವಿಚ್ಛೇದನ ಪಡೆಯದೆ ಮದುವೆಯಾಗುತ್ತಿದ್ದಾರೆ ಎಂಬ ವಿಷಯ ವರದಿಗಳಿಂದ ತಿಳಿಯಿತು ಎಂದು ಹೇಳಿ ಜಿಲ್ಲಾ ಆಯುಕ್ತರಿಗೂ ಈ ಮದುವೆ ತಡೆ ಹಿಡಿಯುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಮಾರ್ಚ್‌ 20ರಂದು ಕೋರ್ಟ್‌ ಮುಂದಿಟ್ಟಿದ್ದರು.

ರಾಮಸ್ವಾಮಿ 2014 ರ ಡಿಸೆಂಬರ್‌ 10 ರಂದು ತನ್ನನ್ನು ಮದುವೆಯಾಗಿದ್ದು, 2016ರ ಡಿಸೆಂಬರ್‌ 23ಕ್ಕೆ ನಮಗೆ ಮಗು ಜನಿಸಿದೆ ಎಂದೂ ಆಕೆ ಮನವಿಯಲ್ಲಿ ತಿಳಿಸಿದ್ದರು.

2012 ರಲ್ಲಿ ಆಕೆ ಪಳನಿಸ್ವಾಮಿ ಎಂಬವರನ್ನು ಮದುವೆಯಾಗಿದ್ದು, ಅದನ್ನು ಮುರಿದುಕೊಂಡಿದ್ದಾರೆ. ಪಳನಿಸ್ವಾಮಿ ಸಲ್ಲಿಸಿರುವ ವಿಚ್ಛೇದನ ಅರ್ಜಿ ದಿಂಡಿಗಲ್‌ ಕೋರ್ಟ್‌ನಲ್ಲಿ ಇನ್ನೂ ಬಾಕಿ ಇದೆ . ಆಕೆ ಮಾನಸಿಕವಾಗಿ ಸ್ಥಿಮಿತದಲ್ಲಿಲ್ಲ. ಹೀಗಾಗಿ ಆಕೆ ದೂರು ಸಲ್ಲಿಸುವುದು ಅಸಮರ್ಪಕ ಎಂದು ರಾಮಸ್ವಾಮಿ ಆರೋಪಿಸಿದ್ದರು.

ಸತ್ಯಪ್ರಿಯ ಅವರ ಮನವಿ ಪರಿಶೀಲಿಸಿದ್ದ ಕೌಟುಂಬಿಕ ನ್ಯಾಯಾಲಯವು ಆಕೆಯ ಮನವಿ ಇತ್ಯರ್ಥವಾಗುವರೆಗೆ ರಾಮಸ್ವಾಮಿ ಬೇರೆ ಮದುವೆಯಾಗುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿತ್ತು.

Comments are closed.