ರಾಷ್ಟ್ರೀಯ

ಚೀನ ಮಿಲಿಟರಿ ಹೆಲಿಕಾಪ್ಟರ್‌ನಿಂದ ಉತ್ತರಾಖಂಡ ಅತಿಕ್ರಮಣ

Pinterest LinkedIn Tumblr


ಹೊಸದಿಲ್ಲಿ: ಚೀನ ಮಿಲಿಟರಿ ಹೆಲಿಕಾಪ್ಟರ್‌ ಇಂದು ಸೋಮವಾರ ಭಾರತೀಯ ವಾಯು ಪ್ರದೇಶವನ್ನು ಉಲ್ಲಂಘನೆ ಮಾಡಿ ಒಳ ಪ್ರವೇಶಿಸಿ ಉತ್ತರಾಖಂಡದ ಚಮೋಲಿ ಜಿಲ್ಲೆಯ ಬಾರಾಹೋತಿ ಪ್ರದೇಶದ ಆಗಸದಲ್ಲಿ ಸುತ್ತು ಹೊಡೆದಿರುವ ಘಟನೆ ವರದಿಯಾಗಿದೆ.

ಒಂದೇ ತಿಂಗಳ ಅವಧಿಯಲ್ಲಿ ಚೀನ ಮಿಲಿಟರಿ ಹೆಲಿಕಾಪ್ಟರ್‌ಗಳು ಭಾರತೀಯ ವಾಯು ಪ್ರದೇಶ ಉಲ್ಲಂಘನೆ ಮಾಡಿರುವುದು ಇದು ನಾಲ್ಕನೇ ಬಾರಿಯಾಗಿದೆ.

ಕಳೆದ ಮಾರ್ಚ್‌ 10ರಂದು ಚೀನ ಮಿಲಿಟರಿಯ ಮೂರು ಹೆಲಿಕಾಪ್ಟರ್‌ಗಳು ಬಾರಾಹೋತಿ ಪ್ರದೇಶವನ್ನು ಪ್ರವೇಶಿಸಿದ್ದವು. ನೈಜ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಂದ ಚೀನದ ಮಿಲಿಟರಿ ಹೆಲಿಕಾಪ್ಟರ್‌ಗಳು ಸುಮಾರು 4 ಕಿ.ಮೀ. ಭಾರತೀಯ ಭೂಭಾಗವನ್ನು ಅತಿಕ್ರಮಿಸಿ ಬಂದು ಸುಮಾರು ಐದು ನಿಮಿಷಗಳ ಕಾಲ ಆಗಸದಲ್ಲಿ ಸುತ್ತು ಹೊಡೆದಿದ್ದವು.

ಲಡ್ಡಾಕ್‌ ಪ್ರದೇಶದಲ್ಲೂ ಚೀನೀ ಹೆಲಿಕಾಪ್ಟರ್‌ಗಳು ಭಾರತೀಯ ವಾಯು ಪ್ರದೇಶ ಉಲ್ಲಂಘನೆಗೈದು ಅತಿಕ್ರಮಣ ನಡೆಸಿದ್ದವು.

ಕಳೆದ ಮಾರ್ಚ್‌ 8ರಂದು ಚೀನದ ಎರಡು ಹೆಲಿಕಾಪ್ಟರ್‌ಗಳು ಲಡ್ಡಾಕ್‌ನಲ್ಲಿ ಬೆಳಗ್ಗೆ 8.55ರ ಹೊತ್ತಿಗೆ ಆಗಸದಲ್ಲಿ ಸುತ್ತು ಹೊಡೆಯುತ್ತಿದ್ದುದು ಕಂಡು ಬಂದಿತ್ತು.

ಕಳೆದ ಫೆ.27ರಂದು ಚೀನೀ ಹೆಲಿಕಾಪ್ಟರ್‌ ಒಂದು ಸುಮಾರು 19 ಕಿ.ಮೀ. ನಷ್ಟು ಭಾರತೀಯ ಭೂಪ್ರದೇಶವನ್ನು ಅತಿಕ್ರಮಿಸಿ ಲಡ್ಡಾಕ್‌ನ ಡೆಸ್ಪಾಂಗ್‌ ಮತ್ತು ಟ್ರಿಗ್‌ ಹೈವೇ ಆಗಸದಲ್ಲಿ ಸುತ್ತು ಹೊಡೆದಿತ್ತು.

-ಉದಯವಾಣಿ

Comments are closed.