ರಾಷ್ಟ್ರೀಯ

515 ಕೋಟಿ ರೂ. ಬ್ಯಾಂಕ್‌ ವಂಚನೆ: ಕಂಪನಿ ಸ್ವತ್ತು ವಶ

Pinterest LinkedIn Tumblr


ಹೊಸದಿಲ್ಲಿ/ಕೋಲ್ಕೊತಾ: ಸುಮಾರು 515 ಕೋಟಿ ರೂ. ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೋಲ್ಕೊತಾ ಮೂಲದ ಕಂಪ್ಯೂಟರ್‌ ಉತ್ಪಾದನಾ ಸಂಸ್ಥೆ ಆರ್‌.ಪಿ ಇನ್ಫೋ ಸಿಸ್ಟಮ್‌ಗೆ ಸೇರಿದ 55.65 ಕೋಟಿ ರೂ. ಮೊತ್ತದ ಸ್ವತ್ತನ್ನು ಜಪ್ತಿ ಮಾಡಿಕೊಂಡಿದೆ.

ಇದರ ಜತೆಗೆ 66 ವಾಹನಗಳು ಹಾಗೂ 2 ಲಕ್ಷ ರೂ. ಬ್ಯಾಂಕ್‌ ಠೇವಣಿಯನ್ನೂ ವಶಪಡಿಸಿಕೊಂಡಿದೆ. ಕೋಲ್ಕೊತಾದಲ್ಲಿರುವ ಇ.ಡಿಯ ವಲಯವಾರು ಕಚೇರಿ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಬೆಂಗಳೂರು, ಅಹಮದಾಬಾದ್‌, ಕೊಚ್ಚಿ, ಕೋಲ್ಕೊತಾ ಮತ್ತು ಮುಂಬಯಿನಲ್ಲಿ ಕಂಪನಿ ಹಾಗೂ ಅದರ ನಿರ್ದೇಶಕರಾದ ಶಿವಾಜಿ ಪಂಜಾ, ಕೌಸ್ತವ್‌ ರಾಯ್‌ ಮತ್ತು ವಿನಯ್‌ ಬಾಫ್ನಾ ಅವರಿಗೆ ಸೇರಿದ ಫ್ಲ್ಯಾಟ್‌, ಭೂಮಿ, ನಿವೇಶನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಐಡಿಬಿಐ, ಎಸ್‌ಬಿಐ, ಯೂನಿಯನ್‌ ಬ್ಯಾಂಕ್‌ ಇಂಡಿಯಾ, ಅಲಹಾಬಾದ್‌ ಬ್ಯಾಂಕ್‌, ಒರಿಯಂಟಲ್‌ ಬ್ಯಾಂಕ್‌ ಕಾಮರ್ಸ್‌ ಹೀಗೆ ಹಲವು ಬ್ಯಾಂಕ್‌ಗಳಿಗೆ ಬರೋಬ್ಬರಿ 515 ಕೋಟಿ ರೂ. ಸಾಲವನ್ನು ಕಂಪನಿ ವಂಚಿಸಿದ್ದು, ಈ ಸಂಬಂಧ ಸಿಬಿಐ ಹಾಗೂ ಇ.ಡಿ ಪ್ರತ್ಯೇಕ ಪ್ರಕರಣ ದಾಖಲಿಸಿವೆ.

Comments are closed.