ತ್ರಿವೇಂದ್ರಂ: ಆಧಾರ್ ಮಾನ್ಯತೆ ಪ್ರಶ್ನಿಸುವವರನ್ನು ಕಟುವಾಗಿ ಟೀಕಿಸಿದ ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಕೆ ಜೆ ಅಲ್ಫೋನ್ನ್ಸ್ ಅವರು, ಜನ ವೀಸಾಗಾಗಿ ಬಿಳಿಯರ ಮುಂದೆ ಬೆತ್ತಲೆಯಾಗಲು ಸಿದ್ಧ ಎಂದು ಭಾನುವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವೀಸಾ ಪಡೆಯಲು ಬೆತ್ತಲೆಯಾದರೂ ಜನಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅವರದ್ದೇ ಸರ್ಕಾರ ಯಾವುದೇ ದತ್ತಾಂಶ ಅಥವಾ ಮಾಹಿತಿ ಕೇಳಿದರೆ ಮಾತ್ರ ಸಮಸ್ಯೆಯಾಗುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಅಮೆರಿಕಾ ವೀಸಾ ಪಡೆಯಲು ನಾನು 10 ಪುಟಗಳ ಮಾಹಿತಿ ನೀಡಿದ್ದೇನೆ. ವೀಸಾಗಾಗಿ ಬೆರಳಚ್ಚು ನೀಡಲು ಮತ್ತು ಬಿಳಿಯರ ಮುಂದೆ ಬೆತ್ತಲೆಯಾದರೂ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಅಲ್ಫೋನ್ಸ್ ಆಕ್ರೇಶ ವ್ಯಕ್ತಪಡಿಸಿದ್ದಾರೆ.
ನಿಮ್ಮದೇ ಸರ್ಕಾರ ನಿಮ್ಮ ಹೆಸರು ಮತ್ತು ವಿಳಾಸ ಕೇಳಿದರೆ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತೀರಾ ಮತ್ತು ಖಾಸಗಿತನ ಹಕ್ಕಿನ ಉಲ್ಲಂಘನೆ ಎನ್ನುತ್ತೀರಿ ಎಂದಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅಲ್ಫೋನ್ಸ್ ‘ಪ್ರಧಾನಿ ನರೇಂದ್ರ ಮೋದಿ ಅವರು ನಿಮ್ಮ ದತ್ತಾಂಶವನ್ನು ಖಾಸಗಿ ಕಂಪನಿಗೆ ನೀಡುತ್ತಾರೆ ಎಂದು ನೀವು ಭಾವಿಸಿದ್ದೀರಾ? ಅಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ. ನಿಮ್ಮ ಯಾವುದೇ ಖಾಸಗಿತನದ ಮಾಹಿತಿ ಸೋರಿಕೆಯಾಗುತ್ತಿಲ್ಲ. ಅದು ಸಂಪೂರ್ಣ ಸುರಕ್ಷಿತವಾಗಿದೆ’ ಎಂದು ಸಚಿವರು ಹೇಳಿದ್ದಾರೆ.
ಆಧಾರ್ ಮಾಹಿತಿ ಪಡೆಯಲು ಕೆಲವು ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ನಾವು ಅವಕಾಶ ಕೊಟ್ಟಿದ್ದೇವೆ ಎಂದು ಅಲ್ಫೋನ್ಸ್ ಸ್ಪಷ್ಟಪಡಿಸಿದ್ದಾರೆ.
Comments are closed.