ರಾಷ್ಟ್ರೀಯ

ಭಾರತದಲ್ಲಿ ಅಪರಾಧಿಗಳ ಸಂಖ್ಯೆ ಜಗತ್ತಿನಲ್ಲೇ ಕಡಿಮೆ…!

Pinterest LinkedIn Tumblr


ಹೊಸದಿಲ್ಲಿ: ಖುಷಿಯ ರಾಷ್ಟ್ರಗಳ ವಿಶ್ವಪಟ್ಟಿಯಲ್ಲಿ ಭಾರತ ಕೆಳಗಿನ ಸ್ಥಾನ ಪಡೆದಿರಬಹುದು. ಆದರೆ, ಅಪರಾಧಗಳಿಂದ ಸೆರೆವಾಸ ಅನುಭವಿಸುವವರ ಪ್ರಮಾಣ ಪರಿಗಣಿಸಿದಾಗ ಬಲಿಷ್ಠ ರಾಷ್ಟ್ರಗಳಿಗಿಂತ ಭಾರತದ ಸ್ಥಾನ ನೆಮ್ಮದಿಪಡುವಷ್ಟು ಮೇಲ್ಮಟ್ಟದಲ್ಲಿದೆ.

ಭಾರತದಲ್ಲಿ ಅಪರಾಧ ಕೃತ್ಯ ನಡೆಸಿ ಸೆರೆವಾಸ ಅನುಭವಿಸುವವರ ಸಂಖ್ಯೆ 1 ಲಕ್ಷಕ್ಕೆ 33 ಮಂದಿ ಮಾತ್ರ. ಅಮೆರಿಕದಲ್ಲಿ ಈ ಸಂಖ್ಯೆ 666ರಷ್ಟು ಗರಿಷ್ಠವಾಗಿದೆ ಎಂದು ಕ್ರಿಮಿನಲ್‌ ಪಾಲಿಸಿ ರೀಸರ್ಚ್‌ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಈ ಸಂಖ್ಯೆ ಚೀನಾ ಮತ್ತು ಇಂಗ್ಲೆಂಡ್‌ ದೇಶಗಳಲ್ಲಿ ಕ್ರಮವಾಗಿ 118 ಮತ್ತು 143 ಆಗಿದೆ.

ನಮ್ಮ ನೆರೆಯ ರಾಷ್ಟ್ರಗಳಿಗೆ ಹೋಲಿಸಿದರೆ, ಪಾಕಿಸ್ತಾನದಲ್ಲಿ ಜೈಲುಹಕ್ಕಿಗಳ ಪ್ರಮಾಣ 1 ಲಕ್ಷಕ್ಕೆ 44, ನೇಪಾಳದಲ್ಲಿ 65, ಶ್ರೀಲಂಕಾ 78 ಮತ್ತು ಬಾಂಗ್ಲಾದೇಶದಲ್ಲಿ 48 ಆಗಿದೆ. ಚೀನಾದಲ್ಲಿ ಇವೆಲ್ಲಕ್ಕಿಂತ ಅಧಿಕ ಅಂದರೆ 1 ಲಕ್ಷಕ್ಕೆ 118 ಮಂದಿ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ.

ಜೈಲು ಶಿಕ್ಷೆ ಅನುಭವಿಸುತ್ತಿರುವ ಒಟ್ಟಾರೆ ಕೈದಿಗಳ ಸಂಖ್ಯೆ ಅಮೆರಿಕದಲ್ಲಿ 21,45,100, ಚೀನಾದಲ್ಲಿ 16,49,804 ಮತ್ತು ಬ್ರೆಜಿಲ್‌ನಲ್ಲಿ 6,72,22 ಮಂದಿ ಜೈಲುವಾಸಿಗಳಾಗಿದ್ದರೆ, ಭಾರತದಲ್ಲಿ 4,19,623 ಮಂದಿ ಕಾರಾಗೃಹವಾಸಿಗಳಾಗಿದ್ದಾರೆ.

ಗಮನಿಸಬೇಕಾದ ವಿಚಾರವೆಂದರೆ, ಭಾರತದಲ್ಲಿ ಜೈಲಿನಲ್ಲಿರುವವರ ಪೈಕಿ ಹೆಚ್ಚಿನವರು ಶಿಕ್ಷೆಗೆ ಗುರಿಯಾದ ಅಪರಾಧಿಗಳಲ್ಲ, ವಿಚಾರಣಾಧೀನ ಕೈದಿಗಳಾಗಿದ್ದಾರೆ. ವಿಚಾರಣಾಧೀನ ಕೈದಿಗಳ ಪ್ರಮಾಣ ಭಾರತದಲ್ಲಿ ಶೇ 67.2, ಅಮೆರಿಕದಲ್ಲಿ ಶೇ 20.3, ಬ್ರೆಜಿಲ್‌ನಲ್ಲಿ ಶೇ 36.2 ರಷ್ಟಿದೆ.

ಜೈಲುಗಳ ಸಾಮರ್ಥ್ಯ ಮೀರಿ ಕೈದಿಗಳ ದಟ್ಟಣೆ ಹೈಟಿಯಲ್ಲಿ ಅತ್ಯಧಿಕವಾಗಿದೆ. ಅಲ್ಲಿ ಒಟ್ಟು ಸಾಮರ್ಥ್ಯದ ಶೇ 454ರಷ್ಟು ಅಧಿಕ ಕೈದಿಗಳನ್ನು ಜೈಲುಗಳಲ್ಲಿ ತುಂಬಲಾಗಿದೆ ಎಂದು ಐಸಿಪಿಆರ್‌ ಹೇಳಿದೆ. ಪ್ರತಿದಿನ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು ಅದನ್ನು ಅಮೆರಿಕ ಖಂಡಿಸಿದೆ.

ಈ ರೀತಿ ಕೈದಿಗಳ ದಟ್ಟಣೆಯ ಪಟ್ಟಿಯಲ್ಲಿ 205 ದೇಶಗಳ ಪೈಕಿ ಭಾರತ 86ನೇ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಕೈದಿಗಳ ದಟ್ಟಣೆ ಶೇ 104 ಆಗಿದ್ದರೆ, ಭಾರತದಲ್ಲಿ ಶೇ 114 ಆಗಿದೆ.

ಜೈಲುಗಳಲ್ಲಿ ಮೂಲಸೌಕರ್ಯದ ಕೊರತೆಯನ್ನು ಗಮನಿಸಿ ಕಳೆದ ತಿಂಗಳು ಸುಪ್ರೀಂ ಕೋರ್ಟ್‌, ಈ ಬಗ್ಗೆ ಗಮನ ಹರಿಸುವಂತೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ)ಕ್ಕೆ ಸೂಚಿಸಿದೆ.

Comments are closed.