ರಾಷ್ಟ್ರೀಯ

ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಗಳ ಪೈಕಿ ಭಾರತದಲ್ಲೇ ಅತ್ಯಂತ ಕಡಿಮೆ ಅಪರಾಧಿಗಳು: ಅಧ್ಯಯನ

Pinterest LinkedIn Tumblr


ದೆಹಲಿ: ಜಗತ್ತಿನ ಪ್ರಮುಖ ಆರ್ಥಿಕ ಶಕ್ತಿಗಳ ಪೈಕಿ ಭಾರತದಲ್ಲಿ ಅತ್ಯಂತ ಕಡಿಮೆ ಅನುಪಾತದ ಜನರು ಕಾರಾಗೃಹಗಳಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಪ್ರತಿ ಒಂದು ಲಕ್ಷ ಜನರಿಗೆ 33 ಮಂದಿ ಜೈಲುಗಳಲ್ಲಿದ್ದಾರೆ ಎಂದು ಕ್ರಿಮಿನಲ್ ನೀತಿ ಸಂಶೋಧನಾ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಸಂಸ್ಥೆಯು ಜಗತ್ತಿನಾದ್ಯಂತ ಜೈಲುಗಳ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿದ್ದು ವರದಿ ಸಿದ್ಧಪಡಿಸಿದೆ.

ಈ ವಿಚಾರದಲ್ಲಿ ದೊಡ್ಡಣ್ಣ ಅಮೆರಿಕ ಅಗ್ರ ಸ್ಥಾನ ಕಾಪಾಡಿಕೊಂಡಿದ್ದು ಪ್ರತಿ

ಲಕ್ಷ ಜನರಿಗೆ 666 ಮಂದಿಯನ್ನು ಜೈಲುಗಳಲ್ಲಿ ಇಟ್ಟಿದೆ. ಅಮೆರಿಕ ಬಿಟ್ಟರೆ ರಷ್ಯಾ ಹಾಗು ಬ್ರೆಝಿಲ್‌ಗಳು ನಂತರ ಸ್ಥಾನಗಳಲ್ಲಿವೆ.

ಭಾರತದ ನೆರೆಯ ದೇಶಗಳಾದ ಪಾಕಿಸ್ತಾನದಲ್ಲಿ ಈ ಅನುಪಾತ 44 ಇದ್ದರೆ, ನೇಪಾಳದಲ್ಲಿ 65, ಶ್ರೀಲಂಕಾದಲ್ಲಿ 78 ಹಾಗು ಬಾಂಗ್ಲಾದೇಶದಲ್ಲಿ 48ರಷ್ಟಿದೆ. ಭಾರತಕ್ಕೆ ಹೋಲಿಸಿದಲ್ಲಿ ಸಾಕಷ್ಟು ಹೆಚ್ಚು ಖೈದಿಗಳನ್ನ ಹೊಂದಿರುವ ಚೀನಾದಲ್ಲಿ ಪ್ರತಿ ಲಕ್ಷಕ್ಕೆ 118 ಮಂದಿ ಜೈಲಲ್ಲಿ ಇರುತ್ತಾರೆಂದು ತಿಳಿದುಬಂದಿದೆ.

ಅತ್ಯಂತ ಹೆಚ್ಚು ಖೈದಿಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲೂ ಅಗ್ರಜ ಅಮೆರಿಕ ತನ್ನ ಸ್ಥಾನ ಉಳಿಸಿಕೊಂಡಿದ್ದು ಒಟ್ಟಾರೆ 21,45,100 ಖೈದಿಗಳು ಅಲ್ಲಿನ ವಿವಿಧ ಜೈಲುಗಳಲ್ಲಿ ಇದ್ದಾರೆ. ನಂತರದ ಸ್ಥಾನದಲ್ಲಿ ಚೀನಾ ಇದ್ದು 16,49,804 ಖೈದಿಗಳು ಹಾಗು ಬ್ರೆಝಿಲ್‌ನಲ್ಲಿ 6,72,722 ಖೈದಿಗಳಿದ್ದಾರೆ. ಪಟ್ಟಿಯಲ್ಲಿ ಭಾರತಕ್ಕೆ ಐದನೇ ಸ್ಥಾನವಿದ್ದು ದೇಶಾದ್ಯಂತ ವಿವಿಧ ಕಾರಾಗೃಹಗಳಲ್ಲಿ 4,19,623 ಖೈದಿಗಳಿದ್ದಾರೆ ಎಂದು ತಿಳಿದುಬಂದಿದೆ. ನೆರೆಯ ಪಾಕಿಸ್ತಾನದಲ್ಲಿ ಕೇವಲ 84,215 ಮಂದಿ ಖೈದಿಗಳಿದ್ದಾರೆ.

ಕುತೂಹಲಕಾರಿ ಅಂಶವೆಂದರೆ, ಭಾರತೀಯ ಜೈಲುಗಳಲ್ಲಿ ಇರುವ ಹೆಚ್ಚಿನ ಖೈದಿಗಳ

ಮೇಲಿನ ಅರೋಪಗಳು ಸಾಬೀತಾಗಿಲ್ಲ. ಬಂಧಿಗಳ ಪೈಕಿ ಶೇ67.2 ರಷ್ಟು ಮಂದಿ ತಮ್ಮ ಮೇಲಿನ ಪ್ರಕರಣಗಳು ಅಂತ್ಯವಾಗಲು ಕಾಯುತ್ತಿದ್ದಾರೆ. ಅಮೆರಿಕ ಖೈದಿಗಳಲ್ಲಿ ಶೇ 20.3 ರಷ್ಟು ಹಾಗು ಬ್ರೆಝಿಲ್‌ ಬಂಧಿಗಳ ಪೈಕಿ ಶೇ 36.2 ರಷ್ಟು ಮಂದಿ ಮೇಲಿನ ಪ್ರಕರಣಗಳು ಇತ್ಯರ್ಥವಾಗಿಲ್ಲ.

ಇದೇ ವೇಳೆ ಅತಿ ಹೆಚ್ಚು ಸಾಂದ್ರತೆ ಇರುವ ಜೈಲುಗಳನ್ನು ಹೊಂದಿರುವ 205 ದೇಶಗಳ ಪೈಕಿ ಭಾರತ 86ನೇ ಸ್ಥಾನದಲ್ಲಿದೆ. ನಮ್ಮಲ್ಲಿರುವ ಜೈಲುಗಳ ಗರಿಷ್ಠ ಸಾಮರ್ಥ್ಯದ ಶೇ 114ರಷ್ಟು ಬಂಧಿಗಳು ಇದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕದಲ್ಲಿ ಇದರ ಪ್ರಮಾಣ ಶೇ 104ರಷ್ಟಿದೆ.

ಇದೇ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರುವ ಹೈಟಿಯ ಜೈಲುಗಳ ಸಾಮರ್ಥ್ಯದ ಶೇ 454ರಷ್ಟು

ಮಂದಿ ಬಂಧಿಗಳಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ. ವಿಪರೀತ ದಟ್ಟಣೆ ಕಾರಣ ಹೈಟಿ ಖೈದಿಗಳ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ದೂರುಗಳು ಆಗಾಗ ಕೇಳಿ ಬರುತ್ತಿದೆ.

ಜೈಲುಗಳಲ್ಲಿ ಖೈದಿಗಳ ದಟ್ಟಣೆ ಹೆಚ್ಚುತ್ತಿರುವ ಕುರಿತಂತೆ ನಿಗಾ ಇಡಲು ರಾಷ್ಟ್ರೀಯ ನ್ಯಾಯಾಂಗ ಸೇವೆಗಳ ಪ್ರಾಧಿಕಾರಕ್ಕೆ ಸುಪ್ರೀಂ ಕೋರ್ಟ್‌ ಕೇಳಿತ್ತು. ಕಳೆದ ವರ್ಷದ ಅಂತ್ಯಕ್ಕೆ ತಮ್ಮ ಸಾಮರ್ಥ್ಯದ ಶೇ 150ಕ್ಕಿಂತ ಹೆಚ್ಚಿನ ಖೈದಿಗಳನ್ನು ಹೊಂದಿರುವ ಜೈಲುಗಳ ಅಂಕಿಅಂಶಗಳನ್ನು ನೀಡಲು ಪ್ರಾಧಿಕಾರಕ್ಕೆ ಸುಪ್ರೀಂ ಆಗ್ರಹಿಸಿತ್ತು.

ಮೂಲ ಸೌಕರ್ಯ ಸೇರಿದಂತೆ ದೇಶದ 1,382 ಜೈಲುಗಳಲ್ಲಿ ನೆಲೆಸಿರುವ ಅಮಾನವೀಯ ಪರಿಸ್ಥಿತಿಗಳ ಕುರಿತ ವಿಚಾರವಾಗಿ ಪರಮೋಚ್ಛ ನ್ಯಾಯಾಲಯ ಆಲಿಸುತ್ತಿದೆ.

ದೇಶದ ರಾಜ್ಯಗಳ ಅಂಕಿಅಂಶಗಳ ಪೈಕಿ ದದ್ರಾ ಮತ್ತು ನಾಗರ್‌ ಹವೇಲಿ ಕೇಂದ್ರಾಡಳಿತ ಪ್ರದೇಶ(276.7%), ಛತ್ತೀಸ್‌ಗಡ(233.9%) ಹಾಗು ದೆಹಲಿಯ(226.9%) ಜೈಲುಗಳ ಸಾಮರ್ಥ್ಯಕ್ಕಿಂತ ಅತ್ಯಂತ ಹೆಚ್ಚಿನ ಅನುಪಾತದಲ್ಲಿ ಖೈದಿಗಳಿದ್ದು ಅಗ್ರ ಮೂರು ಸ್ಥಾನಗಳಲ್ಲಿ ಇವೆ.

ಈ ರೀತಿ ಪರಿಸ್ಥಿತಿಗಳು ಅಕ್ಷಮ್ಯವಾಗಿದ್ದು ಭಾರೀ ಪ್ರಮಾಣದಲ್ಲಿ ಜನರು ಜೈಲುಗಳಲ್ಲಿ ಇರುವುದು ಮಾನವ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಲ್ಲದೇ ಲಾಕಪ್‌ ಸಾವುಗಳ ಕುರಿತಂತೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ದೇಶಾದ್ಯಂತ ಕಾರಾಗೃಹಗಳಲ್ಲಿ ಆಗುತ್ತಿರುವ ಅಸಹಜ ಸಾವುಗಳನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತಂತೆ ಕೆಲ ಮಾರ್ಗಸೂಚಿಗಳನ್ನು ನೀಡಿದೆ.

Comments are closed.