ರಾಷ್ಟ್ರೀಯ

ಮುಂದುವರಿದ ಪ್ರತಿಮೆ ವಿರೂಪ ಪ್ರವೃತ್ತಿ: ಸರ್ದಾರ ಪಟೇಲ್ ಪ್ರತಿಮೆಗೆ ಅಪಮಾನ

Pinterest LinkedIn Tumblr


ಅಹಮದಾಬಾದ್: ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಪ್ರತಿಮೆ ವಿರೂಪಗೊಳಿಸುವ ಕ್ರೂರ ಪ್ರವೃತ್ತಿ ಪ್ರಧಾನಿ ತವರೂರಾದ ಗುಜರಾತ್ ರಾಜ್ಯಕ್ಕೂ ತಲುಪಿದೆ. ಗಾಂಧಿನಗರದ ಶೆರ್ಥಾ ಗ್ರಾಮದ ಗಂಥಾಲಯ ಆವರಣದಲ್ಲಿರುವ ಭಾರತದ ಮೊದಲ ಉಪ ಪ್ರಧಾನಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಖಾಲಿ ತಂಪು ಪಾನೀಯ ಬಾಟಲಿಗಳ ಹಾರ ಹಾಕಿ ಅವಮಾನಿಸಿದ ಘಟನೆ ಬುಧವಾರ ನಡೆದಿದೆ.

ಘಟನೆ ಸಂಬಂಧ ಅದಲಾಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

ಬಾಬರಿ ಮಸೀದಿ ಧ್ವಂಸಗೊಳ್ಳುವ ಎರಡು ತಿಂಗಳ ಮುಂಚೆ ಅಂದರೆ 1992 ಅಕ್ಟೋಬರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿಯವರು ಈ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.

ಪಟೇಲ್ ಪ್ರತಿಮೆಗೆ ಅವಮಾನ ಮಾಡಿರುವ ದೃಶ್ಯ ವೈರಲ್ ಆಗಿದೆ. ಗ್ರಾಮಸ್ಥರೇ ಪ್ರತಿಮೆ ಮೇಲೆ ಹಾಕಿರುವ ಖಾಲಿ ಪಾನೀಯ ಬಾಟಲಿಗಳ ಹಾರ ತೆಗೆದು ಶುಚಿಗೊಳಿಸಿದ್ದಾರೆ. ಬಳಿಕ ಗ್ರಂಥಾಲಯದ ವ್ಯವಸ್ಥಾಪಕ ಹಸ್ಮೂಕ್ ಪಟೇಲ್ ಅವರು ಅದಾಲಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಗ್ರಂಥಾಲಯದ ಎದುರಿರುವ ಬ್ಯಾಂಕ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸುತ್ತೇವೆ’ ಎಂದು ಅದಾಲಜ್ ಠಾಣೆಯ ಇನ್ಸ್‌ಪೆಕ್ಟರ್ ಜೆ.ಜಿ.ವಘೇಲಾ ಭರವಸೆ ನೀಡಿದ್ದಾರೆ.

ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಲೆನಿನ್ ಪ್ರತಿಮೆ ಉರುಳಿಸಲಾಗಿತ್ತು. ಇದಾದ ಬಳಿಕ ದೇಶದ ವಿವಿಧ ಭಾಗಗಳಲ್ಲಿ ಪ್ರತಿಮೆ ವಿರೂಪಗೊಳಿಸುವ ದುಷ್ಕೃತ್ಯ ನಡೆದಿತ್ತು.

Comments are closed.