ರಾಷ್ಟ್ರೀಯ

ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಕೇಂಬ್ರಿಡ್ಜ್ ಅನಲಿಟಿಕಾ ಹಗರಣದ ಬಗ್ಗೆ ತಿಳಿದುಕೊಳ್ಳಿ…! ಫೇಸ್ ಬುಕ್ ಸಂಬಂಧವೇನು..?

Pinterest LinkedIn Tumblr

ನವದೆಹಲಿ: ಫೇಸ್ ಬುಕ್ ಖಾತೆದಾರರ ಮಾಹಿತಿ ಸೋರಿಕೆ ಸಂಬಂಧ ಇಂದು ವಿಶ್ವಾದ್ಯಂತ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವಿನಲ್ಲಿ ಈ ಸಂಸ್ಥೆ ನಿರ್ಣಾಯಕ ಪಾತ್ರ ನಿರ್ವಹಿಸಿದೆ ಎಂದು ಹೇಳಲಾಗುತ್ತಿದೆ.

ಕೇವಲ ಅಮೆರಿಕ ಮಾತ್ರವಲ್ಲದೇ ಭಾರತದಲ್ಲಿ ನಡೆದ ಹಲವು ಚುನಾವಣೆಗಳಲ್ಲಿ ಈ ಸಂಸ್ಥೆ ಭಾರತದ ವಿವಿಧ ರಾಜಕೀಯ ಪಕ್ಷಗಳಿಗೆ ತನ್ನ ಸೇವೆ ನೀಡಿದ್ದು, ತನ್ಮೂಲಕ ಭಾರತೀಯ ಮತದಾರರ ಮೇಲೆ ಪ್ರಭಾವ ಬೀರಿ ನಿರ್ಧಿಷ್ಟ ಪಕ್ಷಗಳು ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಪ್ರಮುಖವಾಗಿ 2010ರ ಬಿಹಾರ ವಿಧಾನಸಭೆ ಚುನಾವಣೆ, 2014ರ ಲೋಕಸಭಾ ಚುನಾವಣೆ, ಗುಜರಾತ್ ವಿದಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಜೆಡಿಯು ಪಕ್ಷಗಳು ಈ ಸಂಸ್ಥೆಯಿಂದ ಸೇವೆ ಪಡೆದುಕೊಂಡಿದ್ದವು ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಇಷ್ಟಕ್ಕೂ ಏನಿದು ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆ? ಏನಿದು ಫೇಸ್ ಬುಕ್ ದತ್ತಾಂಶ ಸೋರಿಕೆ ಹಗರಣ?
ಸಾಮಾನ್ಯವಾಗಿ ಭಾರತದಲ್ಲಿ ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಚುನಾವಣಾ ಪ್ರಣಾಳಿಕೆ, ಪ್ರಚಾರ, ಸಮಾವೇಶ, ಮತದಾರರಿಗೆ ಪೊಳ್ಳು ಭರವಸೆಗಳು, ಹಣ-ಹೆಂಡ ಹಂಚಿಕೆ, ಭರಪೂರ ಆಶ್ವಾಸನೆಗಳಿರುವ ಚುನಾವಣಾ ಪ್ರಣಾಳಿಕೆ, ಪರಸ್ಪರ ವಾಗ್ವಾದ, ಆರೋಪ-ಪ್ರತ್ಯಾರೋಪ, ಟೀಕೆ-ಟಿಪ್ಪಣಿ, ಲಂಚ ಮತ್ತು ಇತರೆ ಹಗರಣಗಳ ಬಯಲಿಗೆಳೆಯುವಿಕೆ ಇತ್ಯಾದಿ.. ಇದೀಗ ಈ ಪಟ್ಟಿಗೆ ಹೊಸ ಅಂಶವೊಂದು ಸೇರ್ಪಡೆಯಾಗಿದ್ದು, ಅದುವೇ ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರ.

ಚುನಾವಣಾ ಪ್ರಚಾರಗಳಲ್ಲಿ ರಾಜಕಾರಣಿಗಳು ಮಾಡುವ ಹರಿತವಾದ ಮಾತುಗಳಿಗಿಂತ ಸೋಷಿಯಲ್ ಮೀಡಿಯಾದಲ್ಲಿ ಚುನಾವಣೆಯ ಯುದ್ಧ ನಡೆಯುತ್ತಿದೆ, ಸೋಷಿಯಲ್ ಮೀಡಿಯಾದಲ್ಲಿಯೇ ಚುನಾವಣೆಯನ್ನು ಗೆಲ್ಲಲಾಗುತ್ತಿದೆ ಎನ್ನುವಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪ್ರಚಾರ ನಡೆಸಲಾಗುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಅಷ್ಟೇ ಏಕೆ ಎಲ್ಲಾ ಪ್ರಾದೇಶಿಕ ಪಕ್ಷಗಳೂ ಕೂಡ ಸಾಧ್ಯವಾಗುವಷ್ಟರ ಮಟ್ಟಿಗೆ ಮತದಾರರನ್ನು ಸೆಳೆಯಲು, ವಿರೋಧಿಗಳನ್ನು ಸೈದ್ಧಾಂತಿಕವಾಗಿ ಹಣಿಯಲು ಸಾಮಾಜಿಕ ಜಾಲತಾಣಗಳಗಳನ್ನು ಬಳಸಿಕೊಳ್ಳುತ್ತಿವೆ.

ಇನ್ನು ಈ ಸಾಮಾಜಿಕ ಜಾಲತಾಣಗಳನ್ನೇ ಕೇಂಬ್ರಿಡ್ಜ್ ಅನಲಿಟಿಕಾದಂತಹ ಕೆಲ ಖಾಸಗಿ ಸಂಸ್ಥೆಗಳು ದುರ್ಬಳಕೆ ಮಾಡಿಕೊಂಡಿರುವ ಗಂಭೀರ ಆರೋಪ ಕೂಡ ಕೇಳಿಬಂದಿದ್ದು, ಮತದಾರರನ್ನು ನಿರ್ದಿಷ್ಟ ಪಕ್ಷದತ್ತ ಸೆಳೆಯಲು ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿತ್ತು ಎಂದು ಆರೋಪಿಸಲಾಗಿದೆ. ವ್ಯಕ್ತಿತ್ವ ಸಮೀಕ್ಷೆಯ ಹೆಸರಿನಲ್ಲಿ ದಿಸ್ ಈಸ್ ಯುವರ್ ಲೈಫ್ ಎಂಬ ಜನಪ್ರಿಯ ಆ್ಯಪ್ ತಯಾರಿಸಿ ಆದರ ಮೂಲಕ ಮತದಾರರ ಮೇಲೆ ಪ್ರಭಾವ ಬೀರಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಇಜದಕ್ಕಾಗಿ ಈ ಸಂಸ್ಥೆ ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ಸುಮಾರು 50 ಮಿಲಿಯನ್ ಬಳಕೆದಾರರ ದತ್ತಾಂಶವನ್ನು ಕದ್ದು, ಸೋರಿಕೆ ಮಾಡಿದೆ ಎಂದು ಹೇಳಲಾಗಿದೆ.

ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಕೇಂಬ್ರಿಡ್ಜ್ ಅನಾಲಿಟಿಕಾ ಎಂಬುದು ರಾಜಕೀಯ ಪಕ್ಷಗಳಿಗಾಗಲಿ, ಮತ್ತಾವುದೇ ಸಂಸ್ಥೆಗಳಿಗಾಗಲಿ, ಫೇಸ್ ಬುಕ್ ನಂಥ ಸಂಸ್ಥೆಗಳಿಂದ ಭಾರೀ ಪ್ರಮಾಣದಲ್ಲಿ ಜನರ/ಮತದಾರರ ದತ್ತಾಂಶ ಸಂಗ್ರಹಿಸಿ, ಅವರ ವರ್ತನೆಯನ್ನು ಅಧ್ಯಯನ ಮಾಡಿ, ಮತದಾರರನ್ನು ಸೆಳೆಯಲು ತಂತ್ರಗಾರಿಕೆ ರೂಪಿಸುವ ಸೇವೆ ಒದಗಿಸುವ ಒಂದು ಖಾಸಗಿ ಸಂಸ್ಥೆಯಾಗಿದೆ. ತಜ್ಞರು ಮತ್ತು ತನಿಖಾ ಸಂಸ್ಥೆಗಳು ನೀಡಿರುವ ಮಾಹಿತಿಯಂತೆ ಲಂಡನ್ ನಲ್ಲಿ ಈ ಸಂಸ್ಥೆಯ ಮುಖ್ಯ ಕಚೇರಿ ಇದ್ದು, ಅಲೆಕ್ಸಾಂಡರ್ ನಿಕ್ಸ್ ಎಂಬುವವರು ಇದರ ಸಂಸ್ಥಾಪಕರಾಗಿದ್ದಾರೆ. ಇದರ ಮೇಲಿರುವ ಆರೋಪಗಳೆಂದರೆ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಫೇಸ್ ಬುಕ್ ನಿಂದ ಕೋಟ್ಯಂತರ ಅಮೆರಿಕನ್ನರ ದತ್ತಾಂಶಗಳನ್ನು ಸಂಗ್ರಹಿಸಿ, ಅವರನ್ನು ಅಭ್ಯಸಿಸಿ, ಮತದಾರ ಭಾವನೆಗಳೊಂದಿಗೆ ಆಟವಾಡಿ ಅವರನ್ನು ಮರಳು ಮಾಡಿ, ಅವರ ಮನೋಭಾವನೆಗೆ ತಕ್ಕಂತೆ ಅವರ ಮೇಲೆ ಪ್ರಭಾವ ಬೀರಿ ತಮಗೆ ಬೇಕಾದಂತೆ ಅಂದರೆ ಟ್ರಂಪ್ ಅವರಿಗೆ ಮತ ಹಾಕುವಂತೆ ಪುಸಲಾಯಿಸುವಲ್ಲಿ ಈ ಸಂಸ್ಥೆ ಯಶಸ್ವಿಯಾಗಿತ್ತು ಎನ್ನಲಾಗಿದೆ.

ಈ ಸಂಸ್ಥೆ ತನ್ನದೇ ವೆಬ್ ಸೈಟಿನಲ್ಲಿ ಹೇಳಿಕೊಂಡಿರುವ ಪ್ರಕಾರ, ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ, ಬ್ರಿಟನ್ ನ ಕೇಂಬ್ರಿಡ್ಜ್ ವಿವಿಯ ಮನಃಶಾಸ್ತ್ರಜ್ಞರಾದ ಅಲೆಕ್ಸಾಂಡರ್ ಕೋಗನ್ ಎಂಬುವವರ ಜೊತೆ ಒಪ್ಪಂದ ಮಾಡಿಕೊಂಡು, ದಿಸ್ ಈಸ್ ಯುವರ್ ಲೈಫ್ ಎಂಬ ಆ್ಯಪ್ ಸೃಷ್ಟಿಸಿ ಅಮೆರಿಕದ ಮತದಾರರ ಬಗ್ಗೆ ಸಾಕಷ್ಟು ವಿವರಗಳನ್ನು ಕಲೆಹಾಕಿತ್ತು. ಇದಕ್ಕಾಗಿ ಹಲವಾರು ಅಮೆರಿಕನ್ನರಿಗೆ ಹಣವನ್ನೂ ಕೂಡ ನೀಡಲಾಗಿತ್ತು. ಜೊತೆಗೆ ಅವರ ಫೇಸ್ ಬುಕ್ ಸ್ನೇಹಿತರಿಗೆ ಸಂಬಂಧಿಸಿದ ಬಹುಮುಖ್ಯವಾದ ದತ್ತಾಂಶಗಳನ್ನು ಪಡೆಯಲು ಅವರ ಅನುಮತಿ ಕೂಡ ಪಡೆಯಲಾಗಿತ್ತು. ಈ ಎಲ್ಲ ದತ್ತಾಂಶಗಳನ್ನು ಬಳಸಿಕೊಂಡು, ಮತ ಹಾಕುವಾಗ ಜನರ ಅಭಿಪ್ರಾಯಗಳನ್ನು ಹೇಗೆ ಬದಲಿಸಬೇಕು, ಅವರನ್ನು ಹೇಗೆ ಮರಳು ಮಾಡಬಹುದು ಎಂಬುದರ ವಿವರ ನೀಡುವಂಥ ಸಾಫ್ಟ್ ವೇರ್ (ದಿಸ್ ಈಸ್ ಯುವರ್ ಲೈಫ್) ಒಂದನ್ನು ಅಭಿವೃದ್ಧಿಪಡಿಸಲಾಗಿತ್ತು. ಆ ಮೂಲಕ ಈ ಸಂಸ್ಥೆ ಮತದಾರರನ್ನು ಮರಳು ಮಾಡುವ ಕಾರ್ಯಾಚರಣೆ ನಡೆಸುತ್ತಿತ್ತು.

ಹಗರಣ ಬಯಲಿಗೆ ಬಂದದ್ದು ಹೇಗೆ?
ಇನ್ನು ಬಹುಮುಖ್ಯವಾದ ಹಗರಣವನ್ನು ಬಯಲಿಗೆಳೆದದ್ದು, ಬ್ರಿಟನ್ ನ ಗಾರ್ಡಿಯನ್ ಪತ್ರಿಕೆಯ ಪತ್ರಕರ್ತ ಮತ್ತು ವಿಸಲ್ ಬ್ಲೋವರ್ ಕ್ರಿಸ್ಟೋಫರ್ ವೇಲೀ ಎಂಬುವವರು. ಪತ್ರಿಕೆಗೆ ಬರೆದಿದ್ದ ಈ ವರದಿಯಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರನ್ನು ಹೇಗೆ ಮರಳು ಮಾಡಲಾಗಿತ್ತು. ಅವರ ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನು ಹೇಗೆ ಕದಿಯಲಾಗುತ್ತಿತ್ತು ಎಂಬಿತ್ಯಾದಿ ಅಂಶಗಳನ್ನು ಒಳಗೊಂಡ ಸರಣಿ ಲೇಖನಗಳನ್ನು ಪ್ರಕಟ ಮಾಡಲಾಗಿತ್ತು. ಈ ವರದಿ ಪ್ರಕಟವಾದ ಬೆನ್ನಲ್ಲೇ ಅಮೆರಿಕ ರಾಜಕೀಯದಲ್ಲಿ ಭಾರಿ ಚರ್ಚೆ ಆರಂಭವಾಗಿದ್ದು, ಈ ವರದಿ ವೈರಲ್ ಆದ ಬೆನ್ನಲ್ಲೇ ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆಯ ಸಿಇಒ ಅಲೆಕ್ಸಾಂಡರ್ ನಿಕ್ಸ್ ಸುದ್ದಿಯಾದರು, ತಮ್ಮ ಸಂಸ್ಥೆ ವಿರುದ್ಧ ಕೇಳಿಬಂದ ಟೀಕೆ ಟಿಪ್ಪಣಿಗಳನ್ನು ಅಲ್ಲಗಳೆದರು. ಆದರೆ ಇದೇ ನಿಕ್ಸ್ ಮಾಧ್ಯಮ ಹೇಳಿಕೆ ವೇಳೆ ತಮ್ಮ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಬಾಯಿ ಬಿಟ್ಟಿದ್ದನ್ನು ಖಾಸಗಿ ಸುದ್ದಿವಾಹಿನಿಯೊಂದು ಪ್ರಸಾರ ಮಾಡಿತ್ತು.

ಬ್ರಿಟನ್ ಮೂಲದ ಚಾನಲ್ 4 ನ್ಯೂಸ್ ಫೇಸ್ ಬುಕ್ ಬಳಕೆದಾರರ ದತ್ತಾಂಶ ಸೋರಿಕೆ ಸಂಬಂಧ ಸುದ್ದಿ ಪ್ರಸಾರ ಮಾಡಿತ್ತು. ಸ್ವತಃ ಕೇಂಬ್ರಿಡ್ಜ್ ಅನಾಲಿಟಿಕ್ಸ್ ಸಂಸ್ಥೆಯ ಸಿಇಒ ಅಲೆಕ್ಸಾಂಡರ್ ನಿಕ್ಸ್ ಅವರು ಈ ಬಗ್ಗೆ ಮಾತನಾಡಿರುವ ವಿಡಿಯೋವನ್ನು ವಾಹಿನಿ ಪ್ರಸಾರ ಮಾಡಿತ್ತು. ವಿಡಿಯೋದಲ್ಲಿ ನಿಕ್ಸ್ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವಿನಲ್ಲಿ ತಮ್ಮ ಸಂಸ್ಥೆ ನಿರ್ಣಾಯಕ ಪಾತ್ರ ನಿರ್ವಹಿಸಿತ್ತು. ಸಾಮಾಜಿಕ ಜಾಲತಾಣಗಳ ಸಂಪೂರ್ಣ ದತ್ತಾಂಶ, ಎಲ್ಲಾ ವಿಶ್ಲೇಷಣೆ, ಎಲ್ಲಾ ಗುರಿಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿತ್ತು ಎಂದು ಹೇಳಿಕೊಂಡಿದ್ದರು. ಅಲ್ಲದೆ ತನ್ನ ಈ ಕಾರ್ಯಕ್ಕಾಗಿ ಇ-ಮೇಲ್ ಗಳ ಬಳಕೆ ಮಾಡಿಕೊಂಡಿದ್ದು, ಈ ಇ-ಮೇಲ್ ಗಳನ್ನು ಸ್ವಯಂ ನಾಶ ಅಥವಾ ಸ್ವಯಂ ಡಿಯಾಕ್ಟಿವೇಟ್ ಆಗುವಂತೆ ರಚಿಸಲಾಗಿತ್ತು. ಇದರಿಂದ ಯಾವುದೇ ತನಿಖಾ ಸಂಸ್ಥೆಯೂ ಕೂಡು ಇದನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗದಂತೆ ನೋಡಿಕೊಳ್ಳಲಾಗಿತ್ತು. ಹೀಗಾಗಿ ಈ ಕಾರ್ಯಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಪೇಪರ್ ದಾಖಲೆಗಳಿಲ್ಲ ಎಂದು ನಿಕ್ಸ್ ಹೇಳಿಕೊಂಡಿದ್ದರು.

ಫೇಸ್ ಬುಕ್ ನಿಂದ ಕೇಂಬ್ರಿಡ್ಜ್ ಅನಲಿಟಿಕಾ ನಿಷೇಧ
ಕೋಟ್ಯಂತರ ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಅವರ ಅನುಮತಿಯಿಲ್ಲದೆ ಕದಿಯಲಾಗಿದೆ ಮತ್ತು ದುರ್ಬಳಕೆ ಮಾಡಲಾಗಿದೆ ಎಂಬ ಸಂಗತಿ ಬಯಲಾಗುತ್ತಿದ್ದಂತೆ, ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯನ್ನು ಫೇಸ್ ಬುಕ್ ನಿಷೇಧಿಸಿತು. ಈ ಕುರಿತು ಸಮಜಾಯಿಷಿ ನೀಡಿದ್ದ ಫೇಸ್ ಬುಕ್, ಫೇಸ್ ಬುಕ್ ಮಾಹಿತಿಯನ್ನು ಬಳಸಿಕೊಳ್ಳಲು ಕೋಗನ್ ಅವರಿಗೆ ಅನುಮತಿ ನೀಡಲಾಗಿತ್ತು. ಆದರೆ, ಆ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಒಪ್ಪಂದವನ್ನು ಕೊಗನ್ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿತ್ತು.

ವಿವಾದಕ್ಕೂ ಭಾರತಕ್ಕೂ ಏನು ಸಂಬಂಧ?
ಕೇವಲ ಅಮೆರಿಕ ಮಾತ್ರವಲ್ಲದೇ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಭಾರತೀಯ ರಾಜಕೀಯ ಪಕ್ಷಗಳೊಂದಿಗೂ ಕೆಲಸ ಮಾಡಿರುವ ಕುರಿತು ಆರೋಪಗಳು ಕೇಳಿಬರುತ್ತಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಕೆಸರೆರಚತಾಟದಲ್ಲಿ ತೊಡಗಿವೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವ ರವಿ ಶಂಕರ್ ಪ್ರಸಾದ್ ಅವರು ಹೇಳಿಕೆ ನೀಡಿದ್ದು, ರಾಜಕೀಯ ದುರುದ್ದೇಶಕ್ಕಾಗಿ ಕೋಟ್ಯಂತರ ಭಾರತೀಯ ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಂಡಿದ್ದೇ ಆದಲ್ಲಿ, ಫೇಸ್ ಬುಕ್ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಅವರನ್ನು ಕರೆಸಿ ವಿಚಾರಿಸಲು ಕೂಡ ಹಿಂಜರಿಯುವುದಿಲ್ಲ ಎಂದಿದ್ದಾರೆ. ಸದ್ಯಕ್ಕೆ ಈ ವಿಚಾರ ರಾಜಕೀಯ ಅಂಗಳದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥರಾಗಿರುವ ರಮ್ಯಾ ಅವರು ಕೂಡ ಬಿಜೆಪಿಗೆ ತಿರುಗೇಟು ನೀಡಿದ್ದಾರೆ

Comments are closed.