ರಾಷ್ಟ್ರೀಯ

ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯ ಹತ್ಯೆ ಪ್ರಕರಣ; 11 ಗೋರಕ್ಷಕರಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

ರಾಮಗರ್: ಗೋಮಾಂಸ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಜಾರ್ಖಂಡ್ ನ ರಾಮಗರ್ ದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ್ದ 11 ಗೋರಕ್ಷಕರಿಗೆ ವಿಚಾರಣಾ ಕೋರ್ಟ್ ಬುಧವಾರ ಜೀವಾವಧಿ ಶಿಕ್ಷೆ ನೀಡಿ ತಿರ್ಪು ನೀಡಿದೆ.

ಕಳೆದ ಮಾರ್ಚ್ 16ರಂದು 11 ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದ ಕೇಳ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಇಂದು ಓರ್ವ ಬಿಜೆಪಿ ನಾಯಕ ನಿತ್ಯಾನಂದ್ ಮೆಹ್ತೊ ಹಾಗೂ ಸ್ಥಳೀಯ ಎಬಿವಿಪಿ ಕಾರ್ಯಕರ್ತ ಸೇರಿದಂತೆ 11 ಗೋರಕ್ಷಕರಿಗೆ ಜೀವಾವಧಿ ಶಿಕ್ಷೆ ನೀಡಿ ಮಹತ್ವದ ಆದೇಶ ಹೊರಡಿಸಿದೆ.

ಗೋರಕ್ಷಣೆಯ ಹೆಸರಲ್ಲಿ ಹತ್ಯೆ ಮಾಡಿದವರಿಗೆ ಶಿಕ್ಷೆ ನೀಡಿದ ದೇಶದ ಮೊಟ್ಟ ಮೊದಲ ಪ್ರಕರಣ ಇದಾಗಿದೆ.

ಜೂನ್ 2017ರಲ್ಲಿ ವಾಹನದಲ್ಲಿ ಗೋ ಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂಬ ಸಂಶಯದ ಮೇಲೆ ಈ 11 ಗೋ ರಕ್ಷಕರು ಅಲಿಮುದ್ದೀನ್ ಅಲಿಯಾಸ್ ಅಸ್ಗರ್ ಅನ್ಸಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ಆತನ ಮಾರುತಿ ವ್ಯಾನ್ ಅನ್ನು ಸುಟ್ಟು ಹಾಕಿದ್ದರು.

ರಾಮಗರ್‌ ಠಾಣೆ ವ್ಯಾಪ್ತಿಯ ಜಬಾರ್‌ ಟಾಂಡ್‌ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳದ ನೋಂದಣಿ ಸಂಖ್ಯೆ ಹೊಂದಿದ್ದ ವ್ಯಾನ್‌ ಅನ್ನು ಜನರ ಗುಂಪು ಸುಟ್ಟು ಹಾಕಿತ್ತು.
ಘಟನೆಗೆ ಸಂಬಂಧಿಸಿದಂತೆ ವೀಡಿಯೊ ತುಣುಕನ್ನು ಆಧರಿಸಿ 11 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಗೋಭಕ್ತಿಯ ನೆಪದಲ್ಲಿ ಜನರನ್ನು ಕೊಲ್ಲುವುದನ್ನು ಸಹಿಸಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆ ನೀಡಿದ ದಿನವೇ ಈ ಘಟನೆ ನಡೆದಿತ್ತು.

Comments are closed.