ರಾಷ್ಟ್ರೀಯ

ಕಲಾಪಕ್ಕೆ ಅಡ್ಡಿ ಮಾಡಿದರೆ ಪೇಮೆಂಟ್‌ ಕಟ್‌: ಬಿಜೆಪಿ ಸಂಸದನಿಂದ ಪ್ರಸ್ತಾವ

Pinterest LinkedIn Tumblr


ಹೊಸದಿಲ್ಲಿ: ಹದಿಮೂರನೇ ದಿನವೂ ಸುಗಮವಾಗಿ ಸಂಸತ್‌ ಕಲಾಪ ನಡೆಯದೆ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಇಂಥ ಪ್ರವೃತ್ತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಲಾಪವನ್ನು ಹಾಳುಗೆಡಹುವವರಿಗೆ ಪೇಮೆಂಟ್‌ ಕಟ್‌ ಮಾಡುವ ಮೂಲಕ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಬಿಜೆಪಿ ಸಂಸದರೊಬ್ಬರು ಸ್ಪೀಕರ್‌ಗೆ ಪ್ರಸ್ತಾವ ಸಲ್ಲಿಸಿದ್ದಾರೆ.

ಬಿಜೆಪಿ ಸಂಸದ ಮನೋಜ್‌ ತಿವಾರಿ ಅವರು ಲೋಕಸಭೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರಿಗೆ ಪತ್ರ ಬರೆದು ಈ ಪ್ರಸ್ತಾವ ಸಲ್ಲಿಸಿದ್ದಾರೆ.ಆದರೆ ಬಿಜೆಪಿ ಸಂಸದರ ಈ ಪ್ರಸ್ತಾವವನ್ನು ತೆಲಂಗಾಣ ರಾಷ್ಟ್ರ ಸಮಿತಿಯ ಸದಸ್ಯೆ ಕೆ. ಕವಿತಾ ಟೀಕಿಸಿದ್ದಾರೆ.

ಬಿಜೆಪಿ ಸಂಸದರ ಈ ಪ್ರಸ್ತಾವ ಆಷಾಢಭೂತಿತನದಿಂದ ಕೂಡಿದೆ. ತಾನು ತಪ್ಪು ಮಾಡಿ ಇತರರನ್ನು ದೂಷಿಸುತ್ತಾರೆ. ಪ್ರತಿಪಕ್ಷ ಸದಸ್ಯರ ಅಹವಾಲುಗಳನ್ನು ಸರಕಾರ ಆಲಿಸಿದರೆ ಕಲಾಪಕ್ಕೆ ಅಡ್ಡಿಯಾಗುವ ಸನ್ನಿವೇಶವೇ ಸೃಷ್ಟಿಯಾಗದು ಎಂದು ಟ್ವೀಟ್‌ ಮಾಡಿದ್ದಾರೆ. ‘ತನ್ನ ತಟ್ಟೇಲಿ ಆನೆ ಬಿದ್ದಿದ್ದರೂ ಪರರ ತಟ್ಟೆಯಲ್ಲಿರುವ ನೊಣವನ್ನು ತೋರಿಸಿದಂತೆ ಸಂಸದರ ನಡೆ’ ಎಂದು ಸಂಸದೆ ತಿಳಿಸಿದ್ದಾರೆ.

ಜನ ಪ್ರತಿನಿಧಿಗಳು ಜವಾಬ್ದಾರಿ ಮತ್ತು ರಚನಾತ್ಮಕ ಕಾರ್ಯಗಳಿಂದ ದೂರ ಉಳಿಯುವುದನ್ನು ತಡೆಯುವಲ್ಲಿ ‘ನೋ ವರ್ಕ್‌ ನೋ ಪೇಮೆಂಟ್‌’ ನೀತಿ ಜಾರಿಗೊಳಿಸಲು ಸಲಹೆ ನೀಡುವುದಾಗಿ ಬಿಜೆಪಿ ಸಂಸದ ಮನೋಜ್‌ ತಿವಾರಿ ಸ್ಪೀಕರ್‌ಗೆ ಸಲ್ಲಿಸಿರುವ ಮನವಿಯಲ್ಲಿ ಸಲಹೆ ನೀಡಿದ್ದಾರೆ.

ಮೋದಿ ಸರಕಾರದ ವಿರುದ್ಧ ಆಂಧ್ರಪ್ರದೇಶದ ಪ್ರಾದೇಶಿಕ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿರುವ ಸನ್ನಿವೇಶದಲ್ಲಿ ಟಿಆರ್‌ಎಸ್‌ ತಟಸ್ಥ ನಿಲುವು ತಾಳಿದೆ. ಹೀಗಾಗಿ ಟಿಆರ್‌ಎಸ್‌ ಸಂಸದೆಯ ಪ್ರತಿಕ್ರಿಯೆ ಕುತೂಹಲಕ್ಕೆ ಕಾರಣವಾಗಿದೆ.

Comments are closed.