ರಾಷ್ಟ್ರೀಯ

ಬ್ಯಾಂಕ್‌ಗಳಿಗೆ ಕನಿಷ್ಕ್ ಜ್ಯುವೆಲರಿ 824 ಕೋಟಿ ರೂ. ವಂಚನೆ

Pinterest LinkedIn Tumblr


ಚೆನ್ನೈ: ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ವಂಚಿಸುತ್ತಿರುವ ಪ್ರಕರಣಗಳು ಜನಸಾಮಾನ್ಯರಲ್ಲಿ ಆತಂಕ ಮೂಡಿಸುತ್ತಿದ್ದು, ಇದೀಗ ಇನ್ನೊಂದು ಬಹು ಕೋಟಿ ವಂಚನೆ ಪ್ರಕರಣ ಬೆಳಕು ಕಂಡಿದೆ. ಅತಿ ದೊಡ್ಡ ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (ಎಸ್‍ಬಿಐ) ಚೆನ್ನೈ ಮೂಲದ ಆಭರಣ ಸಮೂಹವೊಂದು ಕೋಟ್ಯಂತರ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಾವಿರ ಕೋಟಿ ವಂಚನೆಗೆ ಕಾರಣರಾಗಿರುವ ಚೆನ್ನೈ ಮೂಲದ ಕನಿಷ್ಕ್ ಗೋಲ್ಡ್ ಪ್ರೈ. ಲಿ. ಮಾಲೀಕರು ವಿದೇಶಕ್ಕೆ ಪರಾರಿಯಾಗಿದ್ದು, ರಾತ್ರೋ ರಾತ್ರಿ ತಮ್ಮ ಮಳಿಗೆಗಳಿಗೆ ಬಾಗಿಲು ಜಡಿದಿರುವುದು, ದಾಖಲೆಗಳನ್ನು ಮಾಯ ಮಾಡಿರುವಂತಹ ಆರೋಪಗಳನ್ನು ಎಸ್‌ಬಿಐ ಮಾಡಿದೆ. ಈ ಸಂಬಂಧ ಆರೋಪಿಗಳ ಪತ್ತೆಗೆ ಸಿಬಿಐ ಮೊರೆಹೋಗಿದೆ.

ಚೆನ್ನೈನ ಟಿ ನಗರದಲ್ಲಿ ಕನಿಷ್ಕ್ ರಿಜಿಸ್ಟರ್ಡ್ ಕಚೇರಿ ಇದ್ದು ಭೂಪೇಶ್ ಕುಮಾರ್ ಜೈನ್ ಮತ್ತು ಅವರ ಪತ್ನಿ ನೀತಾ ಜೈನ್ ಇದರ ಪ್ರವರ್ತಕರು ಮತ್ತು ನಿರ್ದೇಶಕರು. ಆದರೆ ಈ ದಂಪತಿಗಳ ಸುಳಿವಿಲ್ಲ, ಬಹುಶಃ ಮಾರಿಷಶ್‌ಗೆ ಪರಾರಿಯಾಗಿರಬಹುದು ಎಂದು ಬ್ಯಾಂಕ್ ತಿಳಿಸಿದೆ. ಈ ಸಂಬಂಧ ಸಿಬಿಐ ಇನ್ನೂ ಎಫ್‌ಐಆರ್ ದಾಖಲಿಸಿಕೊಂಡಿಲ್ಲ.

ಒಟ್ಟು 14 ಸರಕಾರಿ ಮತ್ತು ಖಾಸಗಿ ಬ್ಯಾಂಕ್ ಒಕ್ಕೂಟದ ನೇತೃತ್ವದಲ್ಲಿ ಕನಿಷ್ಕ್ ಗೋಲ್ಡ್ ಜ್ಯುವೆಲರಿಗೆ ಸಾಲ ನೀಡಲಾಗಿತ್ತು. ಜನವರಿ 25, 2018ರಲ್ಲಿ ಸಿಬಿಐಗೆ ನೀಡಿರುವ ದೂರಿನಲ್ಲಿ ಕನಿಷ್ಕ್ ರಾತ್ರೋರಾತ್ರಿ ತನ್ನ ಮಳಿಗೆಗಳನ್ನು ಮುಚ್ಚಿದ್ದು, ದಾಖಲೆಗಳನ್ನು ತಿರುಚಿದೆ ಎಂದು ತಿಳಿಸಿದೆ.

ಕನಿಷ್ಕ್‌ಗೆ ನೀಡಿರುವ ಪ್ರಧಾನ ಸಾಲದ ಮೊತ್ತ 824 ಕೋಟಿ ರೂ.ಗಳಾಗಿದ್ದು ಬಡ್ಡಿ ಎಲ್ಲಾ ಸೇರಿದರೆ ಒಟ್ಟು 1000 ಕೋಟಿ ರೂ. ಬ್ಯಾಂಕ್‌ಗಳಿಗೆ ನಷ್ಟವಾಗಿದೆ. ಇದರ ಒಟ್ಟಾರೆ ಮೊತ್ತ ಸಾವಿರ ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಆರೋಪಿಗಳು ಮಾರೀಷಸ್‌ಗೆ ಪರಾರಿಯಾಗಿದ್ದಾರೆಂದು ಎಸ್‍ಬಿಐ ಭಾವಿಸುತ್ತಿದೆ. ಸುಮಾರು 824.15 ಕೋಟಿ ರೂ. ಸಾಲದ ಹಗರಣಕ್ಕೆ ಸಂಬಂಧಿಸಿದಂತೆ ಕನಿಷ್ಕ್ ಜ್ಯುವೆಲರಿ ಮಾಲೀಕ, ನಿರ್ದೇಶಕರು ಭೂಪೇಶ್ ಕುಮಾರ್ ಜೈನ್, ಅವರ ಪತ್ನಿ ನೀತಾ ಜೈನ್ ವಿರುದ್ಧ ಸಿಬಿಐಗೆ ದೂರು ನೀಡಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಸಾಲ ವಂಚಕ ಸಂಸ್ಥೆ ಎಂದು ಬ್ಯಾಂಕ್‌ಗಳು ಕನಿಷ್ಕ್ ಜ್ಯುಯೆಲರಿಯನ್ನು ಘೋಷಿಸಿದ್ದವು. ಸೆಪ್ಟೆಂಬರ್ 2017ರಲ್ಲಿ ಕನಿಷ್ಕ್ ಗೋಲ್ಡ್ ವ್ಯವಸ್ಥಾಪಕ ಭೂಪೇಶ್ ಕುಮಾರ್ ಜೈನ್ 20 ಕೋಟಿ ರೂ. ಅಬಕಾರಿ ಸುಂಕದ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ಭೋಪೇಶ್ ಅಂದಿನಿಂದ ಪತ್ನಿ ಸಮೇತ ಪರಾರಿಯಾಗಿದ್ದಾರೆ. ಚೆನ್ನೈನಲ್ಲಷ್ಟೇ ಅಲ್ಲದೆ ಹೈದರಾಬಾದ್, ಕೋಲ್ಕತಾ, ಮುಂಬೈನಲ್ಲೂ ಕನಿಷ್ಕ್ ಜ್ಯುವೆಲರಿ ಮಳಿಗೆಗಳಿವೆ.

Comments are closed.