ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿದ್ದಾರೆ 600 ನಕಲಿ ವೈದ್ಯರು!

Pinterest LinkedIn Tumblr


ಮೀರತ್‌: ಉತ್ತರ ಪ್ರದೇಶದ ವ್ಯಾಪಂ ಹಗರಣಕ್ಕೆ ಸಂಬಂಧಿಸಿ 2014ರಿಂದ ಇದುವರೆಗೆ 600ಕ್ಕೂ ಹೆಚ್ಚು ಅನರ್ಹ ವಿದ್ಯಾರ್ಥಿಗಳು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಮೀರತ್‌ನ ಚೌಧರಿ ಚರಣ್‌ ಸಿಂಗ್‌ ವಿಶ್ವವಿದ್ಯಾಲಯದ 6 ಅಧಿಕಾರಿಗಳು ವಂಚನೆ ಕೃತ್ಯದಲ್ಲಿ ಭಾಗಿಯಾಗಿದ್ದು ಖಾತರಿಯಾಗಿದೆ. ಅನರ್ಹ ವೈದ್ಯಕೀಯ ವಿದ್ಯಾರ್ಥಿಗಳ ಜತೆ 1-1.5 ಲಕ್ಷ ರೂ. ಪಡೆದಿದ್ದರು. ಇತರ ಕೋರ್ಸ್‌ನ ವಿದ್ಯಾರ್ಥಿಗಳನ್ನು ಪಾಸ್‌ ಮಾಡಲು 30,000-40,000 ರೂ. ಪಡೆದಿದ್ದರು ಎಂಬ ಅಂಶ ಬಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಮುಜಾಫರ್‌ನಗರ್‌ ವೈದ್ಯಕೀಯ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. ಬಂಧಿತ ವಿದ್ಯಾರ್ಥಿಗಳು ಎಂಬಿಬಿಎಸ್‌ ಪಾಸ್‌ ಮಾಡಲು ಅಧಿಕಾರಿಗಳಿಗೆ 1 ಲಕ್ಷ ರೂ. ನೀಡಿದ ಆರೋಪ ಎದುರಿಸುತ್ತಿದ್ದಾರೆ.

ಚರಣ್‌ ಸಿಂಗ್‌ ವಿವಿಯ 6 ಅಧಿಕಾರಿಗಳು ಸೇರಿದಂತೆ 9 ಮಂದಿ ವಂಚನೆ ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿಗಳು ತಮಗೆ ವಂಚನೆ ಮಾಫಿಯಾದ ಬಗ್ಗೆ ಮಾಹಿತಿ ಕೊಟ್ಟ ದ್ವಿತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಬಗ್ಗೆ ಮಾಹಿತಿ ನೀಡಿದ್ದು, ಆಕೆಯ ಬಂಧನಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ವಂಚಕರು ದುಡ್ಡು ಕೊಟ್ಟ ಅನರ್ಹ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ತೆಗೆದು ತಜ್ಞರ ಉತ್ತರ ಪತ್ರಿಕೆಯನ್ನು ಜೋಡಿಸುವ ಮೂಲಕ ವಂಚನೆ ಎಸಗುತ್ತಿದ್ದರು ಎನ್ನಲಾಗಿದೆ.

Comments are closed.