ರಾಷ್ಟ್ರೀಯ

ಚುನಾವಣೆ ಗೆಲ್ಲಲು Facebook data ಕಳವು? ರಾಹುಲ್‌ಗೆ ತರಾಟೆ

Pinterest LinkedIn Tumblr


ಹೊಸದಿಲ್ಲಿ: ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರ ಖಾಸಗಿ ಡಾಟಾಗಳನ್ನು ಕದಿಯುವ ಮೂಲಕ ಚುನಾವಣೆಗಳನ್ನು ಗೆಲ್ಲಲು ಸಾಧ್ಯ ಎಂದು ಕಾಂಗ್ರೆಸ್‌ ನಂಬಿದೆಯಾ?’ ಎಂದು ಕೇಂದ್ರ ಸರಕಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ನೇರ ಪ್ರಶ್ನೆಯನ್ನು ಎಸೆದಿದೆ.

ಸಾಮಾಜಿಕ ಮಾಧ್ಯಮಗಳ ದಿಗ್ಗಜನಾಗಿರುವ ಫೇಸ್‌ ಬುಕ್‌ ಒಳಗೊಂಡು ನಡೆದಿರುವ ಭಾರೀ ಪ್ರಮಾಣದ ಖಾಸಗಿ ಮಾಹಿತಿ ಡಾಟಾ ಕಳವಿಗಾಗಿ ರಾಹುಲ್‌ ಗಾಂಧಿ ಅವರನ್ನು ಗುರಿ ಇರಿಸಿ ವಾಗ್ಧಾಳಿ ನಡೆಸಿರುವ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌ ಅವರು ಕಾಂಗ್ರೆಸ್‌ ಅಧ್ಯಕ್ಷರ ಫೇಸ್‌ ಬುಕ್‌ ಪ್ರೊಫೈಲ್‌ನಲ್ಲಿ ಕ್ಯಾಂಬ್ರಿಜ್‌ ಎನಾಲಿಟಿಕಾ ಪಾತ್ರವೇನು ಎಂದು ಪ್ರಶ್ನಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಬ್ರೆಕ್ಸಿಟ್‌ ಅಭಿಯಾನ ಸೇರಿದಂತೆ ರಾಜಕಾರಣಿಗಳಿಗೆ ನೆರವಾಗುವ ಉದ್ದೇಶದೊಂದಿಗೆ ಐದು ಕೋಟಿ ಫೇಸ್‌ ಬುಕ್‌ ಬಳಕೆದಾರರ ಅನುಮತಿಯನ್ನು ಪಡೆಯದೆ ಅವರ ಖಾಸಗಿ ಮಾಹಿತಿಗಳನ್ನು ಕದ್ದಿರುವ ಆರೋಪಕ್ಕೆ ಕ್ಯಾಂಬ್ರಿಜ್‌ ಎನಾಲಿಟಿಕಾ ಗುರಿಯಾಗಿರುವ ಬೆನ್ನಿಗೇ ಈಗ ರಾಹುಲ್‌ ಗಾಂಧಿ ಪರವಾಗಿ ನಡೆದಿರುವ ಫೇಸ್‌ ಬುಕ್‌ ಮಾಹಿತಿ ಚೌರ್ಯಕ್ಕಾಗಿ ಕ್ಯಾಂಬ್ರಿಜ್‌ ಎನಾಲಿಟಿಕಾ ವಿವಾದಕ್ಕೆ ಸಿಲುಕಿದೆ.

ಈ ಬಗ್ಗೆ ಕಾಂಗ್ರೆಸ್‌ ಪಕ್ಷ ಮತ್ತು ಅದರ ನಾಯಕತ್ವವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸಚಿವ ರವಿಶಂಕರ್‌ ಪ್ರಸಾದ್‌ ಅವರು, “ಡಾಟಾ ಕಳವು ಮತ್ತು ಕೈಚಳಕವನ್ನು ಅವಲಂಬಿಸಿ ಕಾಂಗ್ರೆಸ್‌ ಪಕ್ಷ ಚುನಾವಣೆಗಳನ್ನು ಗೆಲ್ಲಲು ಹೊರಟಿದೆಯಾ ? ರಾಹುಲ್‌ ಗಾಂಧಿ ಅವರ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ನಲ್ಲಿ ಕ್ಯಾಂಬ್ರಿಜ್‌ ಎನಾಲಿಟಿಕಾ ಪಾತ್ರವೇನು ?’ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ಸಚಿವ ರವಿಶಂಕರ್‌ ಪ್ರಸಾದ್‌ ಅವರು ಫೇಸ್‌ ಬುಕ್‌ ಗೆ ಕೂಡ ಎಚ್ಚರಿಕೆ ನೀಡಿದ್ದು, ಸಾಮಾಜಿಕ ಮಾಧ್ಯಮಗಳು ಭಾರತದ ಚುನಾವಣಾ ಪ್ರಕ್ರಿಯೆಗಳ ಮೇಲೆ ಅನಪೇಕ್ಷೀತ ಮಾರ್ಗಗಳ ಮೂಲಕ ಪ್ರಭಾವ ಬೀರುವುದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದಾರೆ.

“ಹಾಗಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಜನರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು, ಆಲೋಚನೆಗಳನ್ನು ವ್ಯಕ್ತಪಡಿಸುವುದನ್ನು ಸರಕಾರ ಬೆಂಬಲಿಸುತ್ತದೆ’ ಎಂದು ಸಚಿವ ಪ್ರಸಾದ್‌ ಹೇಳಿದರು.

-ಉದಯವಾಣಿ

Comments are closed.