ರಾಷ್ಟ್ರೀಯ

ಇರಾಕ್‌ನಲ್ಲಿ ಅಪಹೃತ ಭಾರತೀಯರ ಕಳೇಬರಗಳು ಪತ್ತೆಯಾಗಿದ್ದು ಹೇಗೆ?

Pinterest LinkedIn Tumblr

* ಮೊಸೂಲ್‌ ನಗರದ ವಾಯುವ್ಯ ಭಾಗದ ಬಾದುಶ್‌ ಗ್ರಾಮದಲ್ಲಿ ಶವಗಳನ್ನು ಹೂಳಲಾಗಿತ್ತು. ಈ ಪ್ರದೇಶವನ್ನು ಇರಾಕ್ ಸೇನೆ ಐಸಿಸ್‌ ಉಗ್ರರಿಂದ ಮರಳಿ ವಶಪಡಿಸಿಕೊಂಡಿದೆ.* ಐಸಿಸ್‌ ಉಗ್ರರು ಶವಗಳನ್ನು ಹೂತು ಹಾಕಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ನೀಡಿದ ಮಾಹಿತಿ ಮೇರೆಗೆ ಬಾದುಶ್‌ ಸಮೀಪದ ಮಣ್ಣಿನ ದಿಬ್ಬದಲ್ಲಿ ಶೋಧ ನಡೆಸಲಾಯಿತು.
* ಮಣ್ಣಿನ ದಿಬ್ಬ ಸಾಮೂಹಿಕ ಗೋರಿಯೇ ಎಂಬುದನ್ನು ಖಚಿತಪಡಿಸಲು ಇರಾಕಿ ಅಧಿಕಾರಿಗಳು ರಾಡಾರ್ ಬಳಸಿದ್ದರು.


ಹೊಸದಿಲ್ಲಿ: ಮೂರು ವರ್ಷಗಳ ಹಿಂದೆ ಇರಾಕ್‌ನ ಮೊಸೂಲ್‌ ನಗರದಲ್ಲಿ ಐಸಿಸ್‌ ಉಗ್ರರಿಂದ ಹತರಾದ 38 ಭಾರತೀಯರ ಕಳೇಬರಗಳನ್ನು ಇರಾಕ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ವಾಯುವ್ಯ ಮೊಸೂಲ್‌ನ ಬಾದುಶ್‌ ಗ್ರಾಮದ ಬಳಿ ಅಪಹೃತ ಭಾರತೀಯರ ದೇಹಗಳನ್ನು ಹೂಳಲಾಗಿತ್ತು. ಕಳೆದ ಜುಲೈನಲ್ಲಿ ಈ ಪ್ರದೇಶವನ್ನು ಇರಾಕ್ ಸೇನೆ ಮರಳಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.

‘ದಾಯೇಶ್‌ ಉಗ್ರರ ಗುಂಪುಗಳು ಈ ಹೀನ ಕೃತ್ಯ ನಡೆಸಿವೆ’ ಎಂದು ಇರಾಕಿ ಅಧಿಕಾರಿ ನಜಿಹಾ ಅಬ್ದುಲ್ ಅಮೀರ್ ಅಲ್‌ ಶಿಮಾರಿ ಸುದ್ದಿಗಾರರಿಗೆ ತಿಳಿಸಿದರು. ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಗೆ ಅರಬ್‌ ಭಾಷೆಯಲ್ಲಿ ದಾಯೇಶ್‌ ಎಂಬ ಪದ ಬಳಸಲಾಗುತ್ತಿದೆ.

‘ಶವಗಳು ನಮ್ಮ ಮಿತ್ರರಾಷ್ಟ್ರವಾದ ಭಾರತದ ಪ್ರಜೆಗಳದ್ದು. ಅವರ ಘನತೆಯನ್ನೇನೋ ಕಾಯಲು ಸಾಧ್ಯವಾಗಿರಬಹುದು, ಆದರೆ ಇಸ್ಲಾಮಿನ ತತ್ವಗಳಿಗೆ ಮಸಿ ಬಳಿಯಲು ದುಷ್ಟ ಶಕ್ತಿಗಳು ಹವಣಿಸಿದ್ದಾರೆ’ ಎಂದು ಇರಾಕಿ ಹುತಾತ್ಮರ ಕಲ್ಯಾಣ ಸಂಘಟನೆಯ ಮುಖ್ಯಸ್ಥ ನಜಿಹಾ ತಿಳಿಸಿದರು. ಐಸಿಸ್‌ ಉಗ್ರರ ವಿರುದ್ಧ ಸಮರದಲ್ಲಿ ಮೃತಪಟ್ಟ ನಾಗರಿಕರ ಕುಟುಂಬಗಳ ಹಿತ ಕಾಪಾಡುವ ಸಂಘಟನೆ ಇದಾಗಿದೆ.

ಅಪಹೃತ ಕಾರ್ಮಿಕರು ಬಹುತೇಕ ಉತ್ತರ ಭಾರತೀಯರು. ಮೊಸೂಲ್‌ ಸಮೀಪ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದವರು. ಮೊಸೂಲ್‌ ಅನ್ನು ಉಗ್ರರು ವಶಪಡಿಸಿಕೊಂಡ ಐದು ದಿನಗಳ ಬಳಿಕ ಕೆಲವು ಕಾರ್ಮಿಕರು ಭಾರತದಲ್ಲಿರುವ ತಮ್ಮ ಕುಟುಂಬದವರಿಗೆ ಕರೆ ಮಾಡಿ ನೆರವಿಗಾಗಿ ಯಾಚಿಸಿದ್ದರು.

ಆ ಸಂದರ್ಭದಲ್ಲಿ ಸುಮಾರು 10 ಸಾವಿರ ಮಂದಿ ಭಾರತೀಯರು ಉದ್ಯೋಗಕ್ಕಾಗಿ ಇರಾಕ್‌ನಲ್ಲಿ ನೆಲೆಸಿದ್ದರು.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಸಂಸತ್ತಿನಲ್ಲಿ, ಅಪಹೃತ ಭಾರತೀಯರನ್ನು ಉಗ್ರರು ಹತ್ಯೆ ಮಾಡಿರುವ ವಿಷಯವನ್ನು ದೃಢಪಡಿಸಿದರು. ಬಾದುಶ್‌ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಮಣ್ಣಿನ ದಿಬ್ಬವೊಂದು ಕಂಡುಬಂತು. ಉಗ್ರರು ಅದರಡಿಯಲ್ಲಿ ಶವಗಳನ್ನು ಹೂಳಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ ಬಳಿಕ ಭಾರತೀಯರ ಶವಗಳ ಅವಶೇಷಗಳು ಪತ್ತೆಯಾದವು ಎಂದು ಸಚಿವೆ ಸದನಕ್ಕೆ ಮಾಹಿತಿ ನೀಡಿದರು.

ಆ ಮಣ್ಣಿನ ದಿಬ್ಬದ ಅಡಿಯಲ್ಲಿ ಸಾಮೂಹಿಕ ಶವದಫನ ಮಾಡಿರುವುದನ್ನು ಇರಾಕಿ ಅಧಿಕಾರಿಗಳು ರಾಡಾರ್‌ ಬಳಸಿ ಪತ್ತೆ ಮಾಡಿದ್ದರು. ಬಳಿಕ ಮಣ್ಣಿನ ದಿಬ್ಬವನ್ನು ಅಗೆದು ಶವಗಳನ್ನು ಹೊರತೆಗೆಯಲಾಯಿತು. ಬಳಿಕ ಭಾರತೀಯ ಅಧಿಕಾರಿಗಳು ಅಪಹೃತರ ಬಂಧುಗಳ ಡಿಎನ್‌ಎ ಮಾದರಿಗಳನ್ನು ಕಳುಹಿಸಿಕೊಟ್ಟಿದ್ದರು.

ಸಾಮೂಹಿಕ ಗೋರಿಯಲ್ಲಿ ಪತ್ತೆಯಾದ 38 ಶವಗಳ ಡಿಎನ್‌ಎ ಹೊಂದಾಣಿಕೆಯಾಗಿದ್ದು, ಒಂದು ಶವದ ಗುರುತು ಮಾತ್ರ ಇನ್ನೂ ಪೂರ್ಣ ಖಚಿತವಾಗಿಲ್ಲ ಎಂದು ಸುಷ್ಮಾ ಸ್ವರಾಜ್‌ ತಿಳಿಸಿದರು.

Comments are closed.