ರಾಷ್ಟ್ರೀಯ

ಮೋದಿ ಎಂಬ ಹೆಸರಲ್ಲೇ ವಂಚನೆ ಅಡಗಿದೆ!: ರಾಹುಲ್‌ ವಾಗ್ದಾಳಿ

Pinterest LinkedIn Tumblr


ಹೊಸದಿಲ್ಲಿ: ಮೋದಿ ಎಂಬ ಹೆಸರಿನಲ್ಲೇ ವಂಚನೆ ಇದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ನ 84ನೇ ಪೂರ್ಣಾಧಿವೇಶನದಲ್ಲಿ ಸಮಾರೋಪ ಭಾಷಣ ಮಾಡಿದ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ತೀವ್ರವಾಗಿ ಕಿಡಿ ಕಾರಿದರು.

ಪಿಎನ್‌ಬಿ ಹಗರಣದ ನೀರವ್‌ ಮೋದಿ, ಐಪಿಎಲ್‌ ಹಗರಣದ ಲಲಿತ್‌ ಮೋದಿ ಅವರು ಹೆಸರು ಹೇಳಿ ‘ಮೋದಿ ಎಂಬ ಹೆಸರಿನಲ್ಲೇ ಮೋಸ ಇದೆ. ಪ್ರಧಾನಿ ಮೋದಿ ಮನಿ ಮಾರ್ಕೆಟಿಂಗ್‌ ಮಾಡಿ ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ. ಇದೇ ಅವರ ತಂತ್ರ’ ಎಂದರು.

‘ನಾನು ಕೇವಲ ದೇವಾಲಯಕ್ಕೆ ಮಾತ್ರ ಹೋಗುವುದಲ್ಲ, ಮಸೀದಿ,ಚರ್ಚ್‌, ಗುರುದ್ವಾರಗಳಿಗೆ ಹೋಗುತ್ತೇನೆ.ಆದರೆ ದೇವಾಲಯಕ್ಕೆ ತೆರಳಿದ್ದು ಮಾತ್ರ ದೊಡ್ಡ ಸುದ್ದಿ ಮಾಡುತ್ತಾರೆ. ದೇವರು ಎಲ್ಲಾ ಕಡೆ ಇದ್ದಾರೆ. ಮಂದಿರ ಮಸೀದಿ , ಮರ ಎಲ್ಲಾ ಕಡೆಯಲ್ಲಿ ದೇವರನ್ನು ಕಾಣಬಹುದು’ ಎಂದರು.

‘ಕಾಂಗ್ರೆಸ್‌ ಪಕ್ಷ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಆಗ ಬಿಜೆಪಿ ಎಲ್ಲಿ ಇತ್ತು’ ಎಂದು ಪ್ರಶ್ನಿಸಿದ ಅವರು ಬಿಜೆಪಿಯವರು ಕೌರವರು, ಕಾಂಗ್ರೆಸ್‌ ಪಾಂಡವರಂತೆ ಸತ್ಯದ ಹೋರಾಟದಲ್ಲಿ ತೊಡಗಿದ ಪಕ್ಷ ಎಂದರು.

ಯುವ ಜನತೆಗೆ ಉದ್ಯೋಗ ನೀಡುವಲ್ಲಿ ಬಿಜೆಪಿ ಸರ್ಕಾರ ವಿಫ‌ಲವಾಗಿದ್ದು, ಕಾಂಗ್ರೆಸ್‌ ಯುವಕರ ಪರ ಇರುವ ಪಕ್ಷ ಎಂದರು.

-ಉದಯವಾಣಿ

Comments are closed.