ರಾಷ್ಟ್ರೀಯ

ತ್ರಿಪುರಾದಲ್ಲಿ ಗೋಮಾಂಸ ನಿಷೇಧವಿಲ್ಲ: ಬಿಜೆಪಿ ನಾಯಕನ ಹೇಳಿಕೆ

Pinterest LinkedIn Tumblr


ಹೊಸದಿಲ್ಲಿ: ತ್ರಿಪುರಾದಲ್ಲಿ ಗೋಮಾಂಸ ನಿಷೇಧ ಜಾರಿಗೊಳಿಸಲಾಗದು ಎಂದು ಬಿಜೆಪಿ ನಾಯಕ ಸುನಿಲ್ ದೇವಧರ್‌ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಬಹುಸಂಖ್ಯಾತರ ಆಹಾರಪದ್ಧತಿಯಲ್ಲಿ ಸೇರಿಹೋಗಿರುವುದರಿಂದ ತ್ರಿಪುರಾದಲ್ಲಿ ಗೋಮಾಂಸ ನಿಷೇಧ ಅಸಾಧ್ಯ ಎಂದು ಅವರು ತಿಳಿಸಿದ್ದಾರೆ.

‘ಇಲ್ಲಿ ಬಹುಮಂದಿ ಕ್ರೈಸ್ತರು ಮತ್ತು ಮುಸ್ಲಿಮರು, ಅಲ್ಲದೆ ಕೆಲವು ಹಿಂದೂಗಳೂ ಗೋಮಾಂಸ ಸೇವಿಸುತ್ತಾರೆ. ಹೀಗಾಗಿ ಇಲ್ಲಿ ಗೋಮಾಂಸ ನಿಷೇಧ ಮಾಡಬಾರದು’ ಎಂದು ದೇವಧರ್‌ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಬಿಜೆಪಿಯ ಭರ್ಜರಿ ಗೆಲುವಿನ ರೂವಾರಿಯಾಗಿರುವ ಅವರು, ಯಾವುದೇ ರಾಜ್ಯದಲ್ಲಿ ಗೋಮಾಂಸ ಸೇವನೆ ನಿಷೇಧಿಸುವಾಗ ಆಯಾ ರಾಜ್ಯದ ಬಹುಸಂಖ್ಯಾತ ಜನರ ಆದ್ಯತೆಗಳನ್ನು ಗೌರವಿಸಬೇಕಾಗುತ್ತದೆ. ಕೆಲವು ನಿರ್ಧಾರಗಳನ್ನು ಜನರ ಭಾವನೆಗಳನ್ನು ಗೌರವಿಸಿ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಕಳೆದ ವರ್ಷ ಮೇಘಾಲಯದಲ್ಲೂ ಹಿರಿಯ ಬಿಜೆಪಿ ನಾಯಕರೊಬ್ಬರು, ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರಾಜ್ಯದಲ್ಲಿ ಗೋಮಾಂಸ ನಿಷೇಧ ಹೇರುವುದಿಲ್ಲ; ಆದರೆ ಕಸಾಯಿಖಾನೆಗಳನ್ನು ನಿಯಂತ್ರಿಸಲಾಗುವುದು ಎಂದು ಹೇಳಿದ್ದರು.

ಕಳೆದ ತಿಂಗಳು ಮೇಘಾಲಯದಲ್ಲಿ ಬಿಜೆಪಿಯ ಮಿತ್ರಪಕ್ಷ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ ಅಧಿಕಾರಕ್ಕೆ ಬಂದಿತ್ತು.

2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಗೋಮಾಂಸ ನಿಷೇಧ ವಿಚಾರವನ್ನು ತನ್ನ ರಾಜಕೀಯ ಅಜೆಂಡಾ ಆಗಿ ಗುರುತಿಸಿತ್ತು.

Comments are closed.