ರಾಷ್ಟ್ರೀಯ

ವಿಶ್ವದ ಅತಿದೊಡ್ಡ ನೀರಿನ ಟ್ಯಾಂಕ್‌ಗೆ ಪುನರುಜ್ಜೀವ

Pinterest LinkedIn Tumblr
Tala Tank Repairing. Pic: Subhrajit Chandra

ಕೋಲ್ಕತ: ಶತಮಾನ ಕಂಡಿರುವ 90 ಲಕ್ಷ ಗ್ಯಾಲನ್‌ ಸಾಮರ್ಥ್ಯದ ‘ತಲ್ಲಾಹ್‌ ಟ್ಯಾಂಕ್‌’ ಮತ್ತೆ ತನ್ನ ಗತವೈಭವಕ್ಕೆ ಮರಳಲಿದೆ.

ವಿಶ್ವ ಅತಿದೊಡ್ಡ ನೀರಿನ ಟ್ಯಾಂಕ್‌ ಎಂದೇ ಖ್ಯಾತಿ ಗಳಿಸಿರುವ ತಲ್ಲಾಹ್‌ ಟ್ಯಾಂಕ್‌ ಅಷ್ಟೇ ಗಟ್ಟಿಮುಟ್ಟಾದ ಟ್ಯಾಂಕ್‌ ಆಗಿತ್ತು. 2ನೇ ವಿಶ್ವಯುದ್ಧ ಮತ್ತು 1934ರಲ್ಲಿ ಬಿಹಾರ, ಬಂಗಾಳದಲ್ಲಿ ಸಂಭವಿಸಿದ ಭಾರಿ ಭೂಕಂಪದ ಪರಿಣಾಮ ಕೇವಲ 14 ಕಡೆ ಸೋರಿಕೆ ಸಂಭವಿಸಿತ್ತು. 10 ಮಹಡಿಗಳಷ್ಟು ಎತ್ತರದಲ್ಲಿರುವ ಟ್ಯಾಂಕ್‌ ಶಾಲೆಯ ಆಟದ ಮೈದಾನದಷ್ಟು ಅಗಲವಿದೆ.

ಕೋಲ್ಕತದ ನಿವಾಸಿಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಸುಮಾರು 482 ಎಕರೆ ಪ್ರದೇಶದಲ್ಲಿ ತಲ್ಲಾಹ್‌ ಟ್ಯಾಂಕ್‌ಅನ್ನು ನಿರ್ಮಾಣ ಮಾಡಲಾಯಿತು. ಬಾಬು ಖೆಲಾತ್‌ ಘೋಷ್‌ ಎಂಬುವವರು ಬೃಹತ್‌ ಟ್ಯಾಂಕ್‌ ನಿರ್ಮಾಣಕ್ಕೆ ಜಾಗ ನೀಡಿದ್ದರು. ಹಾಗಾಗಿ ಪಕ್ಕದ ಲೇನ್‌ಗೆ ಖೆಲಾತ್‌ ಬಾಬು ಲೇನ್‌ ಎಂದು ಹೆಸರಿಸಲಾಗಿದೆ. ಬೃಹತ್‌ ಟ್ಯಾಂಕ್‌ ನಿರ್ಮಾಣಕ್ಕೆ ತಗುಲಿದ ವೆಚ್ಚ 11 ಲಕ್ಷ ರೂ.

110 ಅಡಿ ಎತ್ತರ, 18 ಅಡಿ ಆಳ, 321 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ಟ್ಯಾಂಕ್‌ನಲ್ಲಿ 4 ಸ್ವತಂತ್ರ ವಿಭಾಗಗಳಿವೆ. ರಿಪೇರಿ, ಸ್ವಚ್ಛತೆ ಹೀಗೆ ಯಾವುದೇ ಸಂದರ್ಭಗಳಲ್ಲಿ ನೀರು ಸರಬರಾಜು ನಿಲ್ಲಿಸದೆ ಕಾರ್ಯಾಚರಿಸಬಹುದಾದ ವ್ಯವಸ್ಥೆಯನ್ನು ಹೊಂದಿದೆ. ಟೈಟಾನಿಕ್‌ ಹಡಗು ನಿರ್ಮಿಸಿದ ಅಧಿಕಾರಿಗಳೇ ತಲ್ಲಾಹ್‌ ಟ್ಯಾಂಕ್‌ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಟೈಟಾನಿಕ್‌ನಲ್ಲಿ ಬಳಕೆ ಮಾಡಿದ ಗುಣಮಟ್ಟದ ಕಬ್ಬಿಣವನ್ನೇ ಬಳಕೆ ಮಾಡಲಾಗಿತ್ತು.

ಬ್ರಿಡ್ಜ್‌ ಮತ್ತು ರೂಫ್‌ ಕಂಪನಿ ಟ್ಯಾಂಕ್‌ ಪುನರುಜ್ಜೀವನ ಕಾರ್ಯ ಕೈಗೆತ್ತಿಕೊಂಡಿದೆ. ಪುನರುಜ್ಜೀವನಕ್ಕೆ ಸುಮಾರು 60 ಕೋಟಿ ರೂ. ವ್ಯಯಿಸಲಾಗುತ್ತಿದೆ.

ಪರಂಪರೆಯ ಟ್ಯಾಂಕ್‌ಗೆ ಅಂದಿನ ಗತವೈಭವವನ್ನು ಮರಳಿ ತರುತ್ತೇವೆ. ಪುನರುಜ್ಜೀವನ ಕಾರ್ಯವು 3 ವರ್ಷಗಳಲ್ಲಿ ಅಂತ್ಯಗೊಳ್ಳಲಿದೆ ಎಂದು ಸಿಎಂಸಿಯ ನೀರು ಸರಬರಾಜು ಇಲಾಖೆಯ ಮುಖ್ಯಸ್ಥ ಬಿಭಾಸ್‌ ಮೈತಿ ತಿಳಿಸಿದ್ದಾರೆ. ಸಲಹಾ ಮಂಡಳಿಯಲ್ಲಿ ಜಾದವ್‌ಪುರ ವಿವಿ ಮತ್ತು ಖರಾಗ್‌ಪುರ ಐಐಟಿ ತಜ್ಞರು ಇದ್ದಾರೆ.
ಚಿತ್ರ: ಸುಬ್ರಜಿತ್‌ ಚಂದ್ರ

Comments are closed.