ರಾಷ್ಟ್ರೀಯ

ಕರ್ನಾಟಕದಿಂದ ತ.ನಾಡಿಗೆ ಮಲಿನ ನೀರು: ಸುಪ್ರೀಂಗೆ ಸಿಪಿಸಿಬಿ

Pinterest LinkedIn Tumblr


ಚೆನ್ನೈ: ಕಾವೇರಿ ನೀರು ಹಂಚಿಕೆ ಸಂಬಂಧ ದೀರ್ಘಕಾಲದಿಂದ ಕರ್ನಾಟಕದ ಜತೆ ಕಾಲು ಕೆದರಿ ಜಗಳವಾಡುತ್ತಾ ಬಂದಿರುವ ತಮಿಳುನಾಡು ಈಗ ಹೊಸ ಖ್ಯಾತೆ ತೆಗೆದಿದೆ.

ನೀರು ಹಂಚಿಕೆ ಪ್ರಮಾಣದ ಬಗೆಗಿನ ತಕರಾರು ಬದಲಾಗಿ ಈಗ ನೀರಿನ ಗುಣಮಟ್ಟದ ಬಗ್ಗೆ ಆಕ್ಷೇಪಿಸುತ್ತಿದೆ. ತಮಿಳುನಾಡಿಗೆ ಮಾಲಿನ್ಯಯುಕ್ತ ನೀರು ಹರಿಯದಂತೆ ಸೂಕ್ತ ಕ್ರಮ ಮತ್ತು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಶುದ್ಧ ನೀರು ಪೂರೈಸಬೇಕೆಂಬ ಅದರ ಬೇಡಿಕೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಇನ್ನಷ್ಟು ಶಕ್ತಿ ತುಂಬಿದೆ.

ಕರ್ನಾಟಕದಿಂದ ತಮಿಳುನಾಡಿಗೆ ಪ್ರವೇಶಿಸುವ ಮೊದಲು ನೀರು ಮಲಿನವಾಗುತ್ತಿದೆ. ಸಂಸ್ಕರಿಸದ ಒಳಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯ ನೀರನ್ನು ನದಿಗೆ ಬಿಡದಂತೆ ನಿಯಂತ್ರಿಸಬೇಕು ಎಂದು ಆಗ್ರಹಿಸಿ 2015ರಲ್ಲಿ ಆ ರಾಜ್ಯವು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿತ್ತು. ಎರಡೂ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಯು ನೀರಿನ ಮಾದರಿಗಳನ್ನು ಪರೀಕ್ಷಿಸಿದಾಗ ಮಾಲಿನ್ಯಕಾರಕ, ರಾಸಾಯನಿಕಗಳು ಇರುವುದು ಪತ್ತೆಯಾಗಿತ್ತು.

ತಮಿಳುನಾಡಿನ ದೂರನ್ನು ಪರಿಗಣಿಸಿ ಅಧ್ಯಯನ ನಡೆಸಿದ ಮಂಡಳಿಯು ಕಾವೇರಿ ನದಿಯ ಉಪನದಿಗಳಾದ ಥೆನ್‌ಪೆನ್ನೈಯರ್‌ ಮತ್ತು ಅರ್ಕಾವತಿಯಿಂದ ಮಲಿನ ನೀರು ತಮಿಳುನಾಡಿಗೆ ಪ್ರವೇಶಿಸುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದೆ.

Comments are closed.