ಮಂಗಳೂರು, ಮಾರ್ಚ್.11: ಮಂಗಳೂರು ಮೇಯರ್ ಸ್ಥಾನವು ಮುಸ್ಲಿಮರಿಗೆ ಲಭಿಸದೇ ಇರುವುದರಿಂದ ಅತೃಪ್ತ ಕಾಂಗ್ರೆಸ್ಸಿನ ಮುಸ್ಲಿಮರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಬೇಕು. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಕೆಲವು ಮುಸ್ಲಿಂ ಮುಖಂಡರು ಕರೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ನ ಯುವ ಮುಖಂಡರೊಬ್ಬರು ಇದೇ ಕಾರಣ ನೀಡಿ ತಾನು ಪಕ್ಷಕ್ಕೆ ರಾಜಿನಾಮೆ ಸಲ್ಲಿಸುವುದಾಗಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.
ನಗರದ ಖಾಸಗಿ ಹೊಟೇಲೊಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾಹಿಕ್ ಅವರು, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಮುಸ್ಲಿಂ ಅಭ್ಯರ್ಥಿಗೆ ನೀಡದೆ ಅನ್ಯಾಯ ಎಸಗಿದ ಪಕ್ಷದ ಜಿಲ್ಲಾ ನಾಯಕರ ಧೋರಣೆಯನ್ನು ಖಂಡಿಸಿ ಪಕ್ಷ ಹಾಗೂ ಪಕ್ಷದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿಕೆ ನೀಡಿದ್ದಾರೆ.
ಕಳೆದ 6 ವರ್ಷದಿಂದ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು ಸಕ್ರಿಯವಾಗಿ ದುಡಿಯುತ್ತಿದ್ದೆ. ಕಳೆದ ಬಾರಿಯ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತನಾಗಿದ್ದೇನೆ. ಈ ಮಧ್ಯೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಮುಸ್ಲಿಂ ಅಭ್ಯರ್ಥಿಗೆ ನೀಡುವುದಕ್ಕಾಗಿ ನಡೆದ ಪ್ರಯತ್ನದಲ್ಲಿ ಭಾಗಿಯಾಗಿದ್ದೆ.
ಕಳೆದ ವಾರ ನಗರದ ಜಮೀಯ್ಯತುಲ್ ಫಲಾಹ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ 400ಕ್ಕೂ ಅಧಿಕ ಮಂದಿಯ ಪೈಕಿ 31 ಮಂದಿ ಪಕ್ಷದ ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದರು. ಆದರೆ ಈಗ ಯಾರೂ ಮಾತಿಗೆ ಬದ್ಧರಾಗಿಲ್ಲ. ಮುಸ್ಲಿಮರಿಗೆ ಮೇಯರ್ ಸ್ಥಾನ ನೀಡದೆ ವಂಚಿಸಿದ್ದರಿಂದ ಮನನೊಂದ ನಾನು ‘ಸಮುದಾಯಕ್ಕಾದ ನೋವು’ ಎಂದು ಭಾವಿಸಿ ರಾಜೀನಾಮೆ ನೀಡುವುದಾಗಿ ಹೇಳಿದರು.
ಈ ಕುರಿತು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯ ಮನೆಗೆ ಭೇಟಿ ನೀಡಿದ ನಿಯೋಗದೊಂದಿಗೆ ಸಚಿವರು ಸರಿಯಾಗಿ ಮಾತನಾಡಿಲ್ಲ. ನಮ್ಮನ್ನು ಮತೀಯವಾದಿಗಳು ಎಂದು ಬಿಂಬಿಸಿದ್ದಾರೆ. ಈ ಮಧ್ಯೆ ಸ್ಥಳೀಯ ಶಾಸಕ ಬಿ.ಎ.ಮೊಯ್ದಿನ್ ಬಾವರೊಂದಿಗೂ ನಾನು ಮಾತನಾಡಿದ್ದೆ. ಅವರು ಉಸ್ತುವಾರಿ ಸಚಿವರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಒಟ್ಟಿನಲ್ಲಿ ಪಕ್ಷದ ನಾಯಕರಿಂದಾದ ಅನ್ಯಾಯ, ಅವಮಾನದಿಂದ ಬೇಸತ್ತು ಪಕ್ಷದ ಹುದ್ದೆಗೆ ಮಾತ್ರವಲ್ಲ ಪಕ್ಷಕ್ಕೂ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಎರಡು ದಿನದೊಳಗೆ ಮತ್ತೊಂದು ಸಭೆ ಸೇರಿ ಮುಂದಿನ ಹೆಜ್ಜೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ನನ್ನೊಂದಿಗೆ ಸುಮಾರು 150ಕ್ಕೂ ಅಧಿಕ ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮುಹಮ್ಮದ್ ಶಾಹಿಕ್ ಹೇಳಿದರು.
ಪಕ್ಷದ ಕಾರ್ಯಕರ್ತರಾದ ಆರೀಫ್, ತುಫೈಲ್ ಅಬ್ದುಲ್ ರಹ್ಮಾನ್ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.
ಅತೃಪ್ತ ಕಾಂಗ್ರೆಸ್ಸಿನ ಮುಸ್ಲಿಮರು ರಾಜೀನಾಮೆ ನೀಡದಂತೆ ಕೆಲ ಮುಸ್ಲಿಂ ಮುಂಖಂಡರ ಆಗ್ರಹ
ಮಂಗಳೂರು ಮೇಯರ್ ಸ್ಥಾನವು ಮುಸ್ಲಿಮರಿಗೆ ಲಭಿಸದೇ ಇರುವುದರಿಂದ ಅತೃಪ್ತ ಕಾಂಗ್ರೆಸ್ಸಿನ ಮುಸ್ಲಿಮರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಬೇಕು. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳಬಾರದು ಎಂದು ಇದೇ ವೇಳೆ ಉದ್ಯಮಿಗಳಾದ ಹಾಜಿ ಎಸ್.ಎಂ. ರಶೀದ್, ಮನ್ಸೂರ್ ಅಹ್ಮದ್ ಆಝಾದ್, ಕೆ. ಮುಹಮ್ಮದ್ ಹಾರಿಸ್ ಹಾಗು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮನವಿ ಮಾಡಿದ್ದಾರೆ.
ಮೇಯರ್ ಸ್ಥಾನವು ಮುಸ್ಲಿಮರಿಗೆ ಲಭಿಸದಿರುವುದರಿಂದ ಮನಸ್ಸಿಗೆ ನೋವಾಗಿದೆ ನಿಜ. ಆದರೆ ಅದಕ್ಕಾಗಿ ರಾಜೀನಾಮೆ ಸಲ್ಲಿಸುವುದು ಪರಿಹಾರ ಅಲ್ಲ. ಈಗ ರಾಜೀನಾಮೆ ಸಲ್ಲಿಸುವ ನಿರ್ಧಾರ ಕೈಗೊಂಡರೆ ಸಮಾಜದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ದುಡುಕಿನ ತೀರ್ಮಾನ ಕೈಗೊಂಡರೆ ಅದರ ಲಾಭವನ್ನು ಮತೀಯ ಶಕ್ತಿಗಳು ಪಡೆಯುವ ಸಾಧ್ಯತೆ ಇದೆ. ಹಾಗಾಗಿ ರಾಜೀನಾಮೆಯ ನಿರ್ಧಾರವನ್ನು ಕೈ ಬಿಡಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಡಳಿತಾವಧಿಯಲ್ಲಿ ಅರ್ಹವಾಗಿ ಮುಸ್ಲಿಮರಿಗೆ ಮೇಯರ್ ಸ್ಥಾನ ಲಭಿಸಬೇಕು. ಅದಕ್ಕಾಗಿ ಪ್ರಯತ್ನ ನಡೆಸಿದ್ದರೂ ಪಕ್ಷದ ಜಿಲ್ಲಾ ನಾಯಕರು, ಸಚಿವರು ಕೈಗೊಂಡ ತೀರ್ಮಾನಕ್ಕೆ ಬದ್ಧರಾಗಿ ಸಮುದಾಯದ ಹಿತದೃಷ್ಟಿಯಿಂದ ಯಾವುದೇ ದುಡುಕಿನ ತೀರ್ಮಾನ ಕೈಗೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.