ರಾಷ್ಟ್ರೀಯ

ಕೇರಳ ‘ಲವ್‌ ಜಿಹಾದ್‌’ ಪ್ರಕರಣ: ಹದಿಯಾ ಮದುವೆ ಮರು ಊರ್ಜಿತಗೊಳಿಸಿದ ಸುಪ್ರೀಂ

Pinterest LinkedIn Tumblr


ಹೊಸದಿಲ್ಲಿ: ಶಂಕಿತ ‘ಲವ್ ಜಿಹಾದ್’ ಪ್ರಕರಣದ ಸಂತ್ರಸ್ತೆ ಹದಿಯಾ ಅಲಿಯಾಸ್ ಅಖಿಲಾಳ ಮದುವೆ ರದ್ದುಪಡಿಸಿದ ಕೇರಳ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.

ಮುಸ್ಲಿಂ ಯುವಕ ಶಾಫಿನ್ ಜಹಾನ್ ಹಿಂದೂ ಯುವತಿ ಅಖಿಲಾಳನ್ನು ಮತಾಂತರಗೊಳಿಸಿ ಮದುವೆಯಾಗಿರುವುದನ್ನು ಪ್ರಶ್ನಿಸಿ ಅಖಿಲಾಳ ತಂದೆ ಅಶೋಕನ್ ಕೇರಳ ಹೈಕೋರ್ಟಿನ ಮೊರೆಹೋಗಿದ್ದರು. ಕೇರಳ ಹೈಕೋರ್ಟ್ ಈ ಮದುವೆಯನ್ನು ರದ್ದುಗೊಳಿಸಿ ಅಖಿಲಾಳನ್ನು ಹೆತ್ತವರ ವಶಕ್ಕೆ ಒಪ್ಪಿಸಿತ್ತು. ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಶಾಫಿನ್ ಜಹಾನ್ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಜಸ್ಟಿಸ್ ಎ.ಎಂ ಖಾನ್ವಿಲ್ಕರ್ ಮತ್ತು ಡಿ.ಬವೈ ಚಂದ್ರಚೂಡ್ ಅವರ ವಿಭಾಗೀಯ ಪೀಠ ಹದಿಯಾ ಮತ್ತು ಜಹಾನ್ ಮದುವೆಯನ್ನು ಮರು ಊರ್ಜಿತಗೊಳಿಸಿದೆ. ಹದಿಯಾಳ ಒಪ್ಪಿಗೆ ಮೇರೆಗೇ ಈ ಮದುವೆ ನಡೆದಿದೆ ಎಂಬುದು ವಿಚಾರಣೆ ವೇಳೆ ಸುಪ್ರೀಂ ಕೋರ್ಟಿನ ಗಮನಕ್ಕೆ ಬಂದಿದೆ.

ಈ ಆದೇಶದೊಂದಿಗೆ ಇಬ್ಬರ ಮದುವೆ ಅಧಿಕೃತಗೊಂಡಿದ್ದು, ಯಾವುದೇ ಸರಕಾರಿ ಏಜೆನ್ಸಿಗಳ ಕಿರುಕುಳವಿಲ್ಲದೆ ದಂಪತಿಗಳಾಗಿ ಬಾಳಬಹುದಾಗಿದೆ.

ಈ ವಾರದ ಆರಂಭದಲ್ಲಿ ಹದಿಯಾಳ ತಂದೆ ಕೆ.ಎಂ ಅಶೋಕನ್ ಸುಪ್ರೀಂ ಕೋರ್ಟಿನಲ್ಲಿ ವಾದಿಸುತ್ತ, ತಮ್ಮ ಪುತ್ರಿಯನ್ನು ಭಯೋತ್ಪಾದಕರ ನಿಯಂತ್ರಣದಲ್ಲಿರುವ ಸಿರಿಯಾಗೆ ಕರೆದೊಯ್ದು ‘ಲೈಂಗಿಕ ದಾಸಿ ಅಥವಾ ಮಾನವ ಬಾಂಬ್’ ಆಗಿ ಬಳಸುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಅದನ್ನು ತಡೆಯುವುದಕ್ಕಾಗಿಯೇ ತಾವು ಇಷ್ಟೆಲ್ಲ ಪ್ರಯತ್ನ ಪಟ್ಟಿರುವುದಾಗಿಯೂ ಕೋರ್ಟಿಗೆ ತಿಳಿಸಿದ್ದರು.

ಆದರೆ, ತಾನು ಸ್ವಇಚ್ಛೆಯಿಂದಲೇ ಇಸ್ಲಾಂಗೆ ಮತಾಂತರಗೊಂಡಿದ್ದು ಮುಸ್ಲಿಂ ಆಗಿ ಮುಂದುವರಿಯುವುದಾಗಿ ಹದಿಯಾ ಕೋರ್ಟಿಗೆ ತಿಳಿಸಿದ್ದಳು. ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿದವಿತ್ನಲ್ಲಿ, ತಾನು ಸ್ವಂತ ಇಚ್ಛೆಯಿಂದ ಜಹಾನ್ ಜತೆ ಮದುವೆಯಾಗಿದ್ದು ಆತನ ಪತ್ನಿಯಾಗಿ ಸಹಬಾಳ್ವೆ ನಡೆಸಲು ಬಯಸಿರುವುದಾಗಿ ತಿಳಿಸಿದ್ದಾಳೆ.

ತನ್ನ ಮತಾಂತರದಲ್ಲಿ ಜಹಾನ್ ಪಾತ್ರವೇನೂ ಇಲ್ಲ; ತಾನು ಮತಾಂತರವಾದ ಬಳಿಕವಷ್ಟೇ ಜಹಾನ್ ತನ್ನ ಬಾಳಲ್ಲಿ ಪ್ರವೇಶಿಸಿದ್ದಾನೆ ಎಂದು ಹದಿಯಾ ಸ್ಪಷ್ಟಪಡಿಸಿದ್ದಾಳೆ.

ಜಹಾನ್ ಒಬ್ಬ ಭಯೋತ್ಪಾದಕನೆಂದು ಎನ್ಐಎ ತಪ್ಪಾಗಿ ಬಿಂಬಿಸುತ್ತಿದೆ ಎಂದು ಹದಿಯಾ ಆರೋಪಿಸಿದ್ದಾಳೆ.

Comments are closed.