ರಾಷ್ಟ್ರೀಯ

ಟಿಡಿಪಿ ಮೈತ್ರಿ ಅಂತ್ಯ: ಆಂಧ್ರ ಸಂಪುಟದಿಂದ ಬಿಜೆಪಿ ಸಚಿವರು ಹೊರಕ್ಕೆ

Pinterest LinkedIn Tumblr


ಹೈದರಾಬಾದ್‌: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂಪುಟಕ್ಕೆ ಬಿಜೆಪಿ ಸಚಿವರು ರಾಜೀನಾಮೆ ನೀಡಿದ್ದಾರೆ. ಡಾ. ಕಮಿನೇನಿ ಶ್ರೀನಿವಾಸ್‌ ಮತ್ತು ಪಿಡಿಕೊಂಡಾಲ ಮಾಣಿಕ್ಯಾಲ ರಾವ್‌ ರಾಜೀನಾಮೆ ನೀಡಿದವರು.

‘ಕೇಂದ್ರ ಸಂಪುಟದಲ್ಲಿರುವ ನಮ್ಮ ಸಚಿವರು ಮತ್ತು ನಮ್ಮ ಸಂಪುಟದಲ್ಲಿರುವ ಬಿಜೆಪಿ ಸಚಿವರು ರಾಜೀನಾಮೆ ನೀಡಿದ್ದಾರೆ. ಹಾಗಿದ್ದರೂ ಈ ಸಚಿವರು ರಾಜ್ಯದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ತಮ್ಮ ಇಲಾಖೆಗಳಲ್ಲಿ ಗಣನೀಯ ಸುಧಾರಣೆಗಳನ್ನು ತಂದಿದ್ದಾರೆ. ಅವರ ಸೇವೆಗೆ ಕೃತಜ್ಞತೆಗಳು’ ಎಂದು ಮುಖ್ಯಮಂತ್ರಿ ನಾಯ್ಡು ನುಡಿದರು.

ರಾಜ್ಯ ವಿಧಾನಸಭೆಯಲ್ಲಿ ಮಾತನಾಡುತ್ತ, ಕೇಂದ್ರ ಸರಕಾರ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ; ಆದರೆ ಆಂಧ್ರಪ್ರದೇಶಕ್ಕೆ ಗಮನ ಹರಿಸುತ್ತಿಲ್ಲ ಎಂದು ದೂರಿದರು. ಈ ‘ತಾರತಮ್ಯ’ಕ್ಕೆ ಕಾರಣವೇನು ಎಂದು ತಿಳಿಸುವಂತೆ ಅವರು ಆಗ್ರಹಿಸಿದರು.

ನಾಗರಿಕ ವಿಮಾನ ಯಾನ ಸಚಿವ ಪಿ. ಗಜಪತಿ ರಾಜು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಸೃಜನಾ ಚೌಧರಿ (ಇಬ್ಬರೂ ಟಿಡಿಪಿ ಸಚಿವರು) ಕೇಂದ್ರ ಸಂಪುಟಕ್ಕೆ ಇಂದು ರಾಜೀನಾಮೆ ನೀಡುವ ನಿರೀಕ್ಷೆಯಿದೆ. ಬಿಜೆಪಿ ಜತೆಗಿನ ಮೈತ್ರಿ ಕೊನೆಗೊಂಡಿದೆ ಎಂದು ನಾಯ್ಡು ಮಂಗಳವಾರ ರಾತ್ರಿ ಪ್ರಕಟಿಸಿದ್ದರು.

‘ಕೇಂದ್ರ ಸಂಪುಟದಿಂದ ನಮ್ಮ ಇಬ್ಬರು ಸಚಿವರನ್ನು ಹೊರಗೆ ಕರೆಸಿಕೊಳ್ಳುವ ಬಗ್ಗೆ ನಾವು ನಿರ್ಧರಿಸಿದ್ದೇವೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಳ್ಳುವ ಎಲ್ಲ ಪ್ರಯತ್ನಗಳೂ ವಿಫಲವಾದ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದು ಅಂತಿಮವಾಗಿ ವಿಧಿಯಿಲ್ಲದೆ ಕೈಗೊಂಡ ನಿರ್ಧಾರ’ ಎಂದು ನಾಯ್ಡು ಹೇಳಿದ್ದರು.

ಆಂಧ್ರಕ್ಕೆ ವಿಶೇಷ ವರ್ಗದ ಸ್ಥಾನಮಾನ ಮತ್ತು ತೆರಿಗೆ ರಿಯಾಯಿತಿ ನೀಡಲಾಗದು ಎಂದು ವಿತ್ತಸಚಿವ ಅರುಣ್ ಜೇಟ್ಲಿ ಖಡಾಖಂಡಿತವಾಗಿ ಹೇಳಿದ ಬಳಿಕ ಬಿಜೆಪಿ ಜತೆ ಮೈತ್ರಿ ಕಡಿದುಕೊಳ್ಳಲು ಚಂದ್ರಬಾಬು ನಾಯ್ಡು ನಿರ್ಧರಿಸಿದರು.

ತಮ್ಮ ನಿರ್ಧಾರದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ತಿಳಿಸಲು ಪ್ರಯತ್ನಿಸಿದೆ; ದುರದೃಷ್ಟವಶಾತ್‌ ಅವರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ನಾಯ್ಡು ಬೇಸರ ವ್ಯಕ್ತಪಡಿಸಿದ್ದಾರೆ.

Comments are closed.