ರಾಷ್ಟ್ರೀಯ

ಯೋಗಿ ತವರಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿ!;ಮೋದಿ ಅಲೆ ಇಫೆಕ್ಟ್

Pinterest LinkedIn Tumblr

ಲಕ್ನೋ: ಶತ್ರುವಿನ ಶತ್ರು ಮಿತ್ರ ಎನ್ನುವ ಮಾತಿನಂತೆ ಉತ್ತರ ಪ್ರದೇಶದ ಬದ್ಧ ವೈರಿ ಪಕ್ಷಗಳಾದ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಎದುರಿಸಲು ಸಜ್ಜಾಗಿವೆ.

ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸೋಲಿನಿಂದ ಹೊರ ಬರಲು ಇದೀಗ ನಡೆಯಲಿರುವ ಗೋರಖ್‌ಪುರ್‌ ಮತ್ತು ಪುಲ್‌ಪುರ್‌ ಲೋಕಾಸಭಾ ಉಪ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿವೆ.

ಮೈತ್ರಿ ಮಾಡಿಕೊಂಡಿರುವ ವಿಚಾರವನ್ನು ಬಿಎಸ್‌ಪಿ ಅಧಿನಾಯಕಿ ಮಾಯವತಿ ಅವರು ಭಾನುವಾರ ಬಹಿರಂಗ ಪಡಿಸಿದ್ದಾರೆ.

ಬಿಎಸ್‌ಪಿ 2 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ. ಗೋರಖ್‌ಪುರ್‌ನಲ್ಲಿ ಎಸ್‌ಪಿ ಅಭ್ಯರ್ಥಿ ಪ್ರವೀಣ್‌ ಕುಮಾರ್‌ ನಿಶಾದ್‌ ಮತ್ತು ಪುಲ್‌ಪುರ್‌ನಲ್ಲಿ ನಾಗೇಂದ್ರ ಸಿಂಗ್‌ ಪಟೇಲ್‌ ಅವರಿಗೆ ಬೆಂಬಲ ಸೂಚಿಸಿದೆ.

ಇದೇ ವೇಳೆ ನಾವು ಎಸ್‌ಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿಲ್ಲ. ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಬಿಎಸ್‌ಪಿ ನಾಯಕ ಅಶೋಕ್‌ ಗೌತಮ್‌ ಹೇಳಿದ್ದಾರೆ.

ಮಾಯಾವತಿ ಅವರು ರಾಜ್ಯಸಭೆಗೆ ಆಯ್ಕೆಯಾಗಲು ಎಸ್‌ಪಿ ಶಾಸಕರು ಬೆಂಬಲ ನೀಡಲಿದ್ದಾರೆ ಎಂದು ಹೇಳಲಾಗಿದೆ. ಇದೇ ಒಪ್ಪಂದದ ಮೇರೆಗೆ ಮೈತ್ರಿ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಯಾಗಲು ಯೋಗಿ ಆದಿತ್ಯನಾಥ್‌ ಅವರು ಗೋರಖ್‌ಪುರ್‌ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಚುನಾವಣೆ ಎದುರಾಗಿದೆ. ಇಲ್ಲಿ ಬಿಜೆಪಿ ಯಿಂದ ಉಪೇಂದ್ರ ಶುಕ್ಲಾ ಕಣಕ್ಕಿಳಿದಿದ್ದು, ಕಾಂಗ್ರೆಸ್‌ ನಿಂದ ಸುರ್‌ಹಿತ ಚಟರ್ಜಿ ಕರಿಮ್‌ ಅವರು ಕಣಕ್ಕಿಳಿಯಲಿದ್ದಾರೆ.

ಮಾರ್ಚ್‌ 11 ರಂದು 2 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಮಾರ್ಚ್‌ 14 ರಂದು ಫ‌ಲಿತಾಂಶ ಪ್ರಕಟವಾಗಲಿದೆ.

-ಉದಯವಾಣಿ

Comments are closed.