ಜೀವನದಿ ಕಾವೇರಿ ಹುಟ್ಟುವ ನಾಡು ಎನ್ನುವ ಹೆಗ್ಗಳಿಕೆಯನ್ನು ಹೊಂದಿರುವ ಪುಟ್ಟ ಜಿಲ್ಲೆ ಕೊಡಗು ಆರ್.ಗುಂಡೂರಾವ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೇರಿಸಿದ ರಾಜಕೀಯ ಇತಿಹಾಸವನ್ನು ಹೊಂದಿದೆ. ಜಿಲ್ಲೆಯಲ್ಲಿರುವುದು ಕೇವಲ ಎರಡು ವಿಧಾನಸಭಾ ಕ್ಷೇತ್ರಗಳು. ಕೊಡಗಿನ ರಾಜಕೀಯ ರಾಜ್ಯದಲ್ಲಿ ಹೆಚ್ಚು ಪ್ರಭಾವ ಬೀರದೆ ಇರಬಹುದು, ಆದರೆ ಕೊಡಗಿನೊಳಗಿನ ರಾಜಕೀಯ ನಿರೀಕ್ಷೆಯಷ್ಟೇ ಪ್ರಭಾವಶಾಲಿ.
ಕಾರಣ ಕಳೆದ 15 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯನ್ನು ಛಿದ್ರ ಮಾಡುವ ತಾಕತ್ತು ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಒಲಿಯದೆ ಇರುವುದು. ಗ್ರಾ.ಪಂ ಚುನಾವಣೆಯಿಂದ ಲೋಕಸಭಾ ಚುನಾವಣೆಯವರೆಗೆ ಯಾವುದೇ ಚುನಾವಣೆ ಬರಲಿ ಪ್ರತಿಯೊಂದು ಹಂತದಲ್ಲೂ ರಾಜಕೀಯ ತಂತ್ರಗಾರಿಕೆಯನ್ನು ಸಫಲಗೊಳಿಸುವ ಶಕ್ತಿಯನ್ನು ಬಿಜೆಪಿ ಕರಗತ ಮಾಡಿಕೊಂಡಿದೆ.
ಈ ಕಮಲ ಚಾಣಾಕ್ಷ ನಡೆಯಿಂದ ಕೈ ಮತ್ತು ತೆನೆಹೊತ್ತ ಮಹಿಳೆ ಮೇಲೇಳಲಾಗದ ಪರಿಸ್ಥಿತಿಯಲ್ಲಿ ನೆಲಕಚ್ಚಿಕೊಂಡೆ ಇವೆ. ಪ್ರಧಾನಿ ನರೇಂದ್ರಮೋದಿ ಹವಾ ಹಾಗೂ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಟಿಪ್ಪುಜಯಂತಿ ವಿರೋಧಿ ಅಲೆ ಈ ಬಾರಿ ಬಿಜೆಪಿ ಅಭ್ಯರ್ಥಿಗಳನ್ನು ಮತ್ತೆ ದಡ ಸೇರಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಲಿ ಶಾಸಕರಾಗಿರುವ ವಿರಾಪೇಟೆಯ ಬೋಪಯ್ಯ ಅವರು ಮೂರು ಬಾರಿ ಹಾಗೂ
ಮಡಿಕೇರಿಯ ಅಪ್ಪಚ್ಚುರಂಜನ್ ಅವರು ನಾಲ್ಕು ಬಾರಿ ಗೆಲ್ಲುವ ಮೂಲಕ ಕೊಡಗನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿಕೊಂಡರು. ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ರಾಜಕೀಯ ಉತ್ಸಾಹ ಗರಿಗೆದರಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಜೆಡಿಎಸ್ ಈಗಾಗಲೇ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದು, ಮಡಿಕೇರಿ ಕ್ಷೇತ್ರದಿಂದ ಮಾಜಿ ಸಚಿವ ಬಿ.ಎ.ಜೀವಿಜಯ ಹಾಗೂ
ವಿರಾಜಪೇಟೆ ಕ್ಷೇತ್ರದಿಂದ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸಂಕೇತ್ ಪೂವಯ್ಯ ಕಣಕ್ಕಿಳಿದಿದ್ದಾರೆ. ಇಬ್ಬರು ಹಾಲಿ ಶಾಸಕರುಗಳಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಮುಂದಿನ ಅಭ್ಯರ್ಥಿಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ಮಡಿಕೇರಿಯಲ್ಲಿ ನಡೆದ ಸಮಾವೇಶದಲ್ಲಿ ಘೋಷಣೆ ಮಾಡಿ ಹೋಗಿದ್ದಾರೆ.
ಆದರೆ ಸಂಘ ಪರಿವಾರದ ನಿಷ್ಠರಿಗೆ ಈ ಬಾರಿ ಟಿಕೆಟ್ ನೀಡಬೇಕೆನ್ನುವ ಒತ್ತಡ ಸಂಘ ಪರಿವಾರದಿಂದ ಕೇಳಿ ಬರುತ್ತಿದ್ದು, ಒಂದು ಕ್ಷೇತ್ರವನ್ನಾದರು ನೀಡಬೇಕೆನ್ನುವ ಬೇಡಿಕೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದೇ ಇದ್ದು, ಅಂತಿಮವಾಗಿ ಅದೃಷ್ಟ ಯಾರಿಗೆ ಒಲಿಯುತ್ತದೆ ಎಂದು ಕಾದು ನೋಡಬೇಕಷ್ಟೆ. ವಿರಾಜಪೇಟೆಯಲ್ಲಿ ಕಾಂಗ್ರೆಸ್‌ನಿಂದ ಶಿವುಮಾದಪ್ಪ, ಸಿ.ಎಸ್.ಅರುಣ್ ಮಾಚಯ್ಯ ಹಾಗೂ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ ರೇಸ್‌ನಲ್ಲಿದ್ದಾರೆ.
* ಎಸ್.ಕೆ.ಲಕ್ಷ್ಮೀಶ್
-ಉದಯವಾಣಿ