ರಾಷ್ಟ್ರೀಯ

ಕರ್ನಾಟಕದಲ್ಲಿ 2 ಡಜನ್ ಗೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಹತ್ಯೆ: ಪ್ರಧಾನಿ ಮೋದಿ ಗಂಭೀರ ಆರೋಪ

Pinterest LinkedIn Tumblr

ನವದೆಹಲಿ: ಕಳೆದ ಆರು ತಿಂಗಳಲ್ಲಿ ಕರ್ನಾಟಕದಲ್ಲಿ ಎರಡು ಡಜನ್ ಗೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗಂಭೀರ ಆರೋಪ ಮಾಡಿದ್ದಾರೆ.

ತ್ರಿಪುರ ಮತ್ತು ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಇಂದು ಸಂಜೆ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಬಿಜೆಪಿ ಮುಖ್ಯ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಕರ್ನಾಟಕದಲ್ಲಿ ರಾಜಕೀಯ ಕಾರಣಗಳಿಗಾಗಿ ನಮ್ಮ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದ್ದು, ದನಿ ಎತ್ತುವ ಕಾರ್ಯಕರ್ತರ ಧ್ವನಿ ಅಡಗಿಸಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈಶಾನ್ಯ ಭಾರತದವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ ಎಂದು ಹೇಳಿದ್ದೆ. ಅದರಂತೆ ಈಶಾನ್ಯ ಭಾಗದಲ್ಲಿ ನಾವು ಗೆದ್ದಿದ್ದೇವೆ. ಈಗ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ. ಆದರೆ ಕಾಂಗ್ರೆಸ್ ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತಿಲ್ಲ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ.

ಇಂದು ಹೊರಬಿದ್ದ ಮೂರು ರಾಜ್ಯಗಳಲ್ಲಿ ಫಲಿತಾಂಶದಿಂದ ನಮ್ಮ ಕಾರ್ಯಕರ್ತರ ಶಕ್ತಿ ಸಾಬೀತುಪಡಿಸಿದೆ. ಈ ಬಾರಿ ಜನತೆ ವೋಟಿನ ಮೂಲಕ ಉತ್ತರ ನೀಡಿದ್ದಾರೆ. ಬಿಜೆಪಿ ಮೇಲೆ ವಿಶ್ವಾಸವಿಟ್ಟಿದ್ದಕ್ಕೆ ನಿಮಗೆ ಧನ್ಯವಾದ ಎಂದರು.

ತ್ರಿಪುರಾದಲ್ಲಿ 25 ವರ್ಷಗಳಿಂದ ಅಧಿಕಾರದಲ್ಲಿರುವ ಎಡಪಕ್ಷ ಸರ್ಕಾರ ಕಿತ್ತೊಗೆದು ಬಿಜೆಪಿ ಅಧಿಕಾರಕ್ಕೆ ಬಂದಿರುವುದನ್ನು ಸ್ವಾಗತಿಸಿದ ಪ್ರಧಾನಿ ಮೋದಿ, ಇದು ನಕಾರಾತ್ಮಕ, ವಿನಾಶಕಾರಿ ಮತ್ತು ಪ್ರತ್ಯೇಕತಾವಾದಿ ರಾಜಕೀಯವನ್ನು ಜನತೆ ತಿರಸ್ಕರಿಸಿರುವುದರ ದ್ಯೋತಕ ಎಂದು ಬಣ್ಣಿಸಿದ್ದಾರೆ.

Comments are closed.