ರಾಷ್ಟ್ರೀಯ

ಆಧಾರ್ ಲಿಂಕ್‍ನಿಂದ 2.75 ಕೋಟಿ ನಕಲಿ ರೇಷನ್‍ ಕಾರ್ಡ್ ಪತ್ತೆ

Pinterest LinkedIn Tumblr


ಹೊಸದಿಲ್ಲಿ: ಪಡಿತರ ಚೀಟಿಗಳನ್ನು ಆಧಾರ್‌ಗೆ ಲಿಂಕ್ ಮಾಡಿದ ಕಾರಣ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯ ಆಗಿದೆ. ಆಧಾರ್ ಲಿಂಕ್‌ನಿಂದಾಗಿ 2.75 ಕೋಟಿ ನಕಲಿ ಪಡಿತರ ಚೀಟಿ ಪತ್ತೆಯಾಗಿದ್ದು ಸರಕಾರಕ್ಕೆ ಆಗುತ್ತಿದ್ದ ಕೋಟ್ಯಂತರ ರೂಪಾಯಿ ನಷ್ಟಕ್ಕೆ ಬ್ರೇಕ್ ಬಿದ್ದಿದೆ.

ಜನವರಿ 2013ರಿಂದ ರೇಷನ್ ಕಾರ್ಡ್‌ಗಳ ಡಿಜಿಟಲೀಕರಣ ಆರಂಭವಾಗಿ, ಇದು ಕಳೆದ ನಾಲ್ಕು ವರ್ಷಗಳಿಂದ ಇನ್ನಷ್ಟು ವೇಗ ಪಡೆಯಿತು ಎನ್ನುತ್ತಾರೆ ಆಹಾರ ಸಚಿವಾಲಯ ಅಧಿಕಾರಿಗಳು.

ನಕಲಿ ರೇಷನ್ ಕಾರ್ಡ್‌ಗಳಿಂದಾಗಿ ಗೋಧಿ, ಅಕ್ಕಿ ಮತ್ತು ಇತರೆ ಧಾನ್ಯಗಳಿಂದ ಆಗುತ್ತಿದ್ದ ವಾರ್ಷಿಕ 17,500 ಕೋಟಿ ಸೋರಿಕೆ ತಡೆದಂತಾಗಿದೆ. ಇದರಿಂದ ನೇರ ಉಳಿತಾಯವಾಗದಿದ್ದರೂ ಹೊಸ ಫಲಾನುಭವಿಗಳಿಗೆ ಅನುಕೂಲವಾಗಿದೆ. ಜತೆಗೆ ನಿಜವಾದ ಫಲಾನುಭವಿಗಳು ಲಾಭ ಪಡೆಯುವಂತಾಗಿದೆ ಎಂದಿದ್ದಾರೆ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌.

ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯಡಿ ಬರುವವರಿಗೆ 23.19 ಕೋಟಿ ರೇಷನ್ ಕಾರ್ಡ್ ವಿತರಿಸಲಾಗಿದೆ. ಎಲ್ಲಾ ಕಾರ್ಡ್‍ಗಳನ್ನೂ ಡಿಜಿಟಲೀಕರಣ ಮಾಡಲಾಗಿದೆ. ಆಧಾರ್‌ಗೆ ಶೇ.82ರಷ್ಟು ರೇಷನ್ ಕಾರ್ಡ್‍ಗಳನ್ನು ಲಿಂಕ್ ಮಾಡಲಾಗಿದೆ. ಶೇ.100ರಷ್ಟು ಲಿಂಕ್ ಮಾಡಿದ ಬಳಿಕ ಇನ್ನಷ್ಟು ನಕಲಿ ಕಾರ್ಡ್‌ಗಳು ಕ್ಯಾನ್ಸಲ್ ಆಗಲಿವೆ.

ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ನಕಲಿ ರೇಷನ್ ಕಾರ್ಡ್‌ಗಳು ಪತ್ತೆಯಾಗಿವೆ. ಅದೇ ರೀತಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ರಾಜಸ್ಥಾನ, ಛತ್ತೀಸಗಡ ಮತ್ತು ಮಧ್ಯಪ್ರದೇಶಗಳಲ್ಲೂ ಅತಿಹೆಚ್ಚು ನಕಲಿ ಕಾರ್ಡ್‌ಗಳು ಪತ್ತೆಯಾಗಿರುವುದಾಗಿ ಆಹಾರ ಸಚಿವಾಲಯ ತಿಳಿಸಿದೆ. ಆಹಾರ ಭದ್ರತಾ ಕಾಯಿದೆಯು ವಿಶ್ವದ ಅತಿದೊಡ್ಡ ಕಲ್ಯಾಣ ಯೋಜನೆಯಾಗಿದ್ದು 80 ಕೋಟಿ ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.

Comments are closed.