ರಾಷ್ಟ್ರೀಯ

ಏಪ್ರಿಲ್‌ 15ರ ನಂತರ ರಾಜ್ಯ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ: ರಾವತ್‌

Pinterest LinkedIn Tumblr


ಹೊಸದಿಲ್ಲಿ: ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಏಪ್ರಿಲ್‌ 15ರ ನಂತರ ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣೆ ಆಯುಕ್ತ ಒ.ಪಿ. ರಾವತ್‌ ಹೇಳಿರುವುದರೊಂದಿಗೆ, ಚುನಾವಣೆಯೂ ವಿಳಂಬವಾಗುವ ಬಗ್ಗೆ ಸೂಚನೆ ನೀಡಿದ್ದಾರೆ.

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾವತ್‌ ಈ ಮಾಹಿತಿ ನೀಡಿದ್ದು, ಮಾರ್ಚ್‌ ಅಥವಾ ಏಪ್ರಿಲ್‌ ಎರಡನೇ ವಾರದೊಳಗೆ ಬಹುತೇಕ ಎಲ್ಲ ಪರೀಕ್ಷೆಗಳು ಪೂರ್ಣಗೊಳ್ಳಲಿವೆ. ಆ ನಂತರ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದರು ಹೇಳಿದ್ದಾರೆ.

ಏಪ್ರಿಲ್‌ ಮೊದಲ ವಾರದಲ್ಲಿ ಕರ್ನಾಟಕ ಪ್ರವಾಸ ಕೈಗೊಂಡು ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಲಾಗುವುದು. ಸೂಕ್ತ ಸಲಹೆ-ಸೂಚನೆ ಪಡೆದು ಚರ್ಚೆ ನಡೆಸಿ ಎರಡನೇ ವಾರದಲ್ಲಿ ಚುನಾವಣೆ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ರಾವತ್‌ ತಿಳಿಸಿದರು.

ಪ್ರಸ್ತಕ ಕರ್ನಾಟಕ ವಿಧಾನಸಭೆ ಅವಧಿ ಮೇ 28ಕ್ಕೆ ಪೂರ್ಣಗೊಳ್ಳಲಿದೆ.

”ಶೈಕ್ಷಣಿಕ ಮಂಡಳಿಗಳ ಪರೀಕ್ಷೆಗಳು ಮಾರ್ಚ್‌ ಅಂತ್ಯದ ವೇಳೆಗೆ ಮತ್ತು ಇತರ ಪರೀಕ್ಷೆಗಳು ಏಪ್ರಿಲ್‌ 14ರ ಸುಮಾರಿಗೆ ಮುಗಿಯಲಿದ್ದು, ಏಪ್ರಿಲ್‌ 15ರ ವೇಳೆ ಚುನಾವಣೆ ದಿನಾಂಕ ಪ್ರಕಟಿಸಲಾಗುವುದು,” ಎಂದು ತಿಳಿಸಿದ್ದಾರೆ.

ಆಯೋಗದ ಮೂರೂ ಆಯುಕ್ತರು ಏಪ್ರಿಲ್‌ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವ ಬಗ್ಗೆ ಚರ್ಚೆ ನಡೆಸುವರು. ಬಳಿಕ ದಿಲ್ಲಿಯಲ್ಲಿ ವಿಚಾರ ವಿಮರ್ಶೆ ನಡೆಸಿ ದಿನಾಂಕ ಘೋಷಣೆ ಮಾಡಲಿದ್ದಾರೆ.

ಮೇ 3-4ನೇ ವಾರ ಸಾಧ್ಯತೆ

ಒಂದೊಮ್ಮೆ ಏಪ್ರಿಲ್‌ 14ರಂದು ಅಧಿಸೂಚನೆ ಪ್ರಕಟಿಸಿದರೆ ಮೇ 3-4ನೇ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕರ್ನಾಟಕ ವಿಧಾನಸಭೆಯ ಅವಧಿ ಮೇ 28ಕ್ಕೆ ಕೊನೆಗೊಳ್ಳಲಿದೆ.

ಸರಕಾರಕ್ಕೆ ರಿಲೀಫ್‌

ಬೇಗನೆ ಚುನಾವಣೆ ಘೋಷಣೆಯಾದರೆ ನೀತಿ ಸಂಹಿತೆಯಿಂದಾಗಿ ಅಭಿವೃದ್ಧಿ ಕಾರ್ಯಕ್ರಮಗಳ ಘೋಷಣೆಗೆ ಅಡ್ಡಿಯಾಗಬಹುದು ಎಂಬ ಆತಂಕದಲ್ಲಿದ್ದ ಸರಕಾರಕ್ಕೆ ಈಗ ಒಂದು ತಿಂಗಳ ಹೆಚ್ಚುವರಿ ಅವಧಿ ದೊರೆತಂತಾಗಿದೆ.

Comments are closed.