ಕರಾವಳಿ

ಬಾಲಕಾರ್ಮಿಕ ಕಾಯ್ದೆ ಉಲ್ಲಂಘಿಸಿದರೆ ರೂ.ಐವತ್ತು ಸಾವಿರ ದಂಡ : ಜಾಗೃತಿ ಮೂಡಿಸಲು ಜನ ಜಾಗೃತಿ ರಥ

Pinterest LinkedIn Tumblr

ಮಂಗಳೂರು ಫೆಬ್ರವರಿ 27 : ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಅನಿಷ್ಟ ಪಿಡುಗು ಆಗಿದ್ದು, ಬಾಲ್ಯಾವಸ್ಥೆ, ಕಿಶೋರಾವಸ್ಥೆ ಕಾರ್ಮಿಕ (ನಿಷೇಧ & ನಿಯಂತ್ರಣ)ಕಾಯ್ದೆ-1986ರನ್ವಯ 14 ವರ್ಷದೊಳಗಿನ ಬಾಲ್ಯಾವಸ್ಥೆ ಕಾರ್ಮಿಕರನ್ನು ಯಾವುದೇ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ.

15 ವರ್ಷದಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಕಾಯ್ದೆಯನ್ನು ಉಲ್ಲಂಘಿಸಿದ ಮಾಲೀಕರಿಗೆ ರೂ.50,000/-ದವರೆಗೆ ದಂಡ ಹಾಗೂ 2 ವರ್ಷದವರೆಗೆ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಬಹುದಾಗಿರುತ್ತದೆ. ತಪ್ಪಿತಸ್ಥ ಮಾಲೀಕರ ಮೇಲೆ ಪೊಲೀಸ್ ಇಲಾಖೆಯಿಂದ ಎಫ್.ಐ.ಆರ್ ನ್ನು ಸಹ ದಾಖಲಿಸಲಾಗುವುದು.

ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಮಂಗಳೂರು ಇದರ ವತಿಯಿಂದ ಬಾಲ್ಯಾವಸ್ಥೆ, ಕಿಶೋರಾವಸ್ಥೆ ಕಾರ್ಮಿಕರ (ನಿಷೇಧ& ನಿಯಂತ್ರಣ)ಕಾಯ್ದೆ-1986ರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನ ಜಾಗೃತಿ ರಥವನ್ನು ಫೆಬ್ರವರಿ 27 ರಂದು ಕಾನೂನು ಸೇವಾ ಪ್ರಾಧಿಕಾರದ ಆವರಣದಲ್ಲಿ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ಕೆ.ಎಸ್. ಬೀಳಗಿ, ಇವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಗೌರವನ್ವಿತ ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಸದಸ್ಯ ಕಾರ್ಯದರ್ಶಿ, ಮಲ್ಲನಗೌಡ ಪಾಟೀಲ, ಅಧ್ಯಕ್ಷರು, ವಕೀಲರ ಸಂಘ, ಮಂಗಳೂರು, ಎಂ.ಆರ್. ಬಲ್ಲಾಳ್ , ನ್ಯಾಯಾಧೀಶರು ಹಾಗೂ ಕಾರ್ಮಿಕ ಇಲಾಖೆಯಿಂದ ಕೆ.ಬಿ. ನಾಗರಾಜ್, ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಅಧಿಕಾರಿಗಳಾದ ವಿಲ್ಮಾ ಎಲಿಜಬೆತ್ ತಾವ್ರೋ ಮತ್ತು ಕೃಷ್ಣಮೂರ್ತಿ, ಬಾಲಕಾರ್ಮಿಕ ಯೋಜನಾ ನಿರ್ದೇಶಕ ಶ್ರೀನಿವಾಸ ನಾಯಕ್, ಹಿರಿಯ ಕಾರ್ಮಿಕ ನಿರೀಕ್ಷಕರುಗಳಾದ, ಮೇರಿ ಡಯಾಸ್, ವಿರೇಂದ್ರ ಕುಂಬಾರ್, ಗಣಪತಿ ಹೆಗ್ಡೆ, ರಾಜಶೇಖರ ರೆಡ್ಡಿ ಮುಂತಾದವರು ಹಾಜರಿದ್ದರು.

ಸದರಿ ಜಾಗೃತಿ ರಥವು ಫೆಬ್ರವರಿ 27 ರಿಂದ ಮಾರ್ಚ್ 12 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚಾರಸಿ ಸಾರ್ವಜನಿಕರಲ್ಲಿ ಬಾಲಕಾರ್ಮಿಕ ಕಾಯ್ದೆಯ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿ ಪ್ರಕಟನೆ ತಿಳಿಸಿದೆ.

ಸಾರ್ವಜನಿಕರು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿರುವುದು ಕಂಡು ಬಂದಲ್ಲಿ  ಚೈಲ್ಡ್‍ಲೈನ್ :1098, ಕಾರ್ಮಿಕ ಇಲಾಖೆಯ ದೂರವಾಣಿ ಸಂಖ್ಯೆಗಳಾದ 0824-2435343,2433132,2437479 ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಇದರ ದೂರವಾಣಿ ಸಂಖ್ಯೆ 2433131ಗೆ ಕರೆ ಮಾಡಿ ತಿಳಿಸಲು ಸಾರ್ವಜನಿಕರಲ್ಲಿ ಸಹಾಯಕ ಕಾರ್ಮಿಕ ಆಯುಕ್ತರು, ಮಂಗಳೂರು ವಿಭಾಗ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.