ರಾಷ್ಟ್ರೀಯ

ಅಬುಧಾಬಿ ಕಂಪನಿಯ ಶೇ.65ರಷ್ಟು ತೈಲಕ್ಕೆ ಮಂಗಳೂರು ನೆಲೆ

Pinterest LinkedIn Tumblr


ಹೊಸದಿಲ್ಲಿ: ಸಂಯುಕ್ತ ಅರಬ್‌ ಸಂಸ್ಥಾನದೊಂದಿಗೆ(ಯುಎಇ) ಭಾರತ ಮಾಡಿಕೊಂಡಿದ್ದ ಒಪ್ಪಂದದ ಅನ್ವಯ ಅಲ್ಲಿನ ಸರಕಾರಿ ಸ್ವಾಮ್ಯದ ಅಬುಧಾಬಿ ರಾಷ್ಟ್ರೀಯ ಇಂಧನ ಕಂಪನಿ(ಎಡಿಎನ್‌ಒಸಿ) ಉತ್ಪಾದಿಸುವ ಶೇ.65ರಷ್ಟು ಕಚ್ಚಾ ತೈಲದ ಮೇಲೆ ಭಾರತಕ್ಕೆ ಹಕ್ಕು ದೊರೆತಿದೆ. ಅಂದರೆ, 60 ಲಕ್ಷ ಬ್ಯಾರೆಲ್‌ ಕಚ್ಚಾ ತೈಲವು ಭಾರತಕ್ಕೆ ದೊರಕಲಿದ್ದು, ಮಂಗಳೂರಿನಲ್ಲಿರುವ ಚೊಚ್ಚಲ ವ್ಯೂಹಾತ್ಮಕ ತೈಲಾಗಾರದಲ್ಲಿ ದಾಸ್ತಾನು ಮಾಡಲಾಗುತ್ತದೆ.

”ಮೂರು ಬೃಹತ್‌ ಹಡಗುಗಳಲ್ಲಿ ಎಡಿಎನ್‌ಒಸಿ ಕಚ್ಚಾ ತೈಲ ರವಾನಿಸುವ ಪ್ರಕ್ರಿಯೆಯನ್ನು ಏಪ್ರಿಲ್‌ನಿಂದ ಆರಂಭಿಸಲಿದೆ. ಮಂಗಳೂರಿನ ಕಚ್ಚಾ ತೈಲ ಸಂಗ್ರಹಗಾರವು 15 ಲಕ್ಷ ಟನ್‌ ಅಂದರೆ, 1.1 ಕೋಟಿ ಬ್ಯಾರೆಲ್‌ ಕಚ್ಚಾ ತೈಲ ಸಂಗ್ರಹಿಸುವ ತೈಲಾಗಾರಗಳನ್ನು ಹೊಂದಿದೆ. ಅದರ ಅರ್ಧದಷ್ಟು ಇಂಧನವನ್ನು ಎಡಿಎನ್‌ಒಸಿ ಇಲ್ಲಿಗೆ ಪೂರೈಸಲಿದೆ,” ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಲ್ಲಿ ಸಂಗ್ರಹವಾಗುವ ಶೇ.35ರಷ್ಟು ಕಚ್ಚಾ ತೈಲವನ್ನು ಎಡಿಎನ್‌ಒಸಿ ತನ್ನ ವಾಣಿಜ್ಯವ್ಯವಹಾರಕ್ಕೆ ಬಳಸಿಕೊಳ್ಳಲಿದೆ. ಅಂದರೆ ಸಂಸ್ಕರಣಾ ಘಟಕಗಳಿಗೆ ಅಗತ್ಯವಾದಾಗ ಮಾರಾಟ ಮಾಡಲಿದೆ. ಉಳಿಕೆ ಶೇ.65ರಷ್ಟು ಕಚ್ಚಾ ತೈಲವು ಭಾರತಕ್ಕೆ ಸೇರಲಿದೆ. ತುರ್ತು ಸಂದರ್ಭಗಳಲ್ಲಿ ಅಂದರೆ, ಭಾರತಕ್ಕೆ ವಿದೇಶಗಳಿಂದ ಇಂಧನ ಪೂರೈಕೆಯಲ್ಲಿ ತೊಡಕಾದಾಗ ಅಥವಾ ದೇಶದ ಇಂಧನ ಬೇಡಿಕೆಯನ್ನು ಪೂರೈಸುವ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತದೆ.

ಮಂಗಳೂರಿನ ಹೆಮ್ಮೆ

ಭಾರತೀಯ ವ್ಯೂಹಾತ್ಮಕ ಪೆಟ್ರೋಲಿಯಂ ತೈಲಾಗಾರಗಳ ಸಂಸ್ಥೆಯು(ಐಎಸ್‌ಪಿಆರ್‌ಎಲ್‌) ಪಶ್ಚಿಮ ಕರಾವಳಿಯ ಮಂಗಳೂರು ಮತ್ತು ಉಡುಪಿಯ ಪಾದೂರು, ಪೂರ್ವ ಕರಾವಳಿಯ ವಿಶಾಖಪಟ್ಟಣದಲ್ಲಿ ಮೂರು ವ್ಯೂಹಾತ್ಮಕ ತೈಲಾಗಾರಗಳನ್ನು ನಿರ್ಮಾಣ ಮಾಡಿದೆ. ಮಂಗಳೂರಿನಲ್ಲಿನ ದಾಸ್ತಾನಿನಿಂದ ಇಡೀ ದೇಶದ 2.8 ದಿನಗಳ ಇಂಧನ ಅಗತ್ಯವನ್ನು ಪೂರೈಸಬಹುದಾಗಿದೆ. ವಿಶಾಖ ಪಟ್ಟಣದ ತೈಲಾಗಾರದಲ್ಲಿನ ದಾಸ್ತಾನು ಬಳಸಿ, ದೇಶದ 4.7 ದಿನಗಳ ಇಂಧನ ಬೇಡಿಕೆಯನ್ನು ಪೂರೈಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೂರನೇ ಕೇಂದ್ರ: ಎಡಿಎನ್‌ಒಸಿಗೆ ಏಷ್ಯಾದಲ್ಲಿ ಮಂಗಳೂರು ತೈಲಾಗಾರವು ಮೂರನೇ ದಾಸ್ತಾನು ಕೇಂದ್ರವಾಗಲಿದೆ. ಜಪಾನ್‌, ದಕ್ಷಿಣ ಕೊರಿಯಾಕ್ಕೆ ಈ ಮೊದಲು ಕಚ್ಚಾ ತೈಲವನ್ನು ಎಡಿಎನ್‌ಒಸಿ ಪೂರೈಕೆ ಮಾಡಿತ್ತು.

ಏನಿದು ವ್ಯೂಹಾತ್ಮಕ ತೈಲಾಗಾರ?

ದೇಶದ ತುರ್ತು ಅಗತ್ಯಗಳನ್ನು ಪೂರೈಸುವ ಸಲುವಾಗಿ ಭೂಮಿಯ ಆಳದಲ್ಲಿ ವ್ಯೂಹಾತ್ಮಕ ತೈಲಾಗಾರಗಳನ್ನು ನಿರ್ಮಾಣ ಮಾಡಲಾಗುತ್ತದೆ. ಭದ್ರತಾ ಅಪಾಯಗಳನ್ನು ನಿಭಾಯಿಸಲು ಭೂಗತ ತೈಲಾಗಾರಗಳಲ್ಲಿ ತುರ್ತು ದಾಸ್ತಾನು ವ್ಯವಸ್ಥೆ ಇರುತ್ತದೆ. ಇಲ್ಲಿ 3.6 ಕೋಟಿ ಬ್ಯಾರೆಲ್‌ ಇಂಧನವನ್ನು ದಾಸ್ತಾನು ಮಾಡಬಹುದು ಎನ್ನಲಾಗಿದೆ. ಅಂದರೆ, ದೇಶದಲ್ಲಿನ ಮೂರು ತೈಲಾಗಾರದಲ್ಲಿನ ದಾಸ್ತಾನಿನಿಂದ ದೇಶದ 10 ದಿನಗಳ ಇಂಧನದ ಅಗತ್ಯವನ್ನು ಪೂರೈಸಬಹುದಾಗಿದೆ.

ಇತ್ತೀಚೆಗಷ್ಟೇ ಒಪ್ಪಂದಕ್ಕೆ ಅಂಕಿತ

ಪ್ರಧಾನಿ ನರೇಂದ್ರ ಮೋದಿ ಅವರು ಅಬು ಧಾಬಿಗೆ ತಿಂಗಳ ಆರಂಭದಲ್ಲಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಂಗಳೂರಿನ ಭೂಗತ ವ್ಯೂಹಾತ್ಮಕ ತೈಲಾಗಾರದಲ್ಲಿ ಕಚ್ಚಾ ತೈಲ ಸಂಗ್ರಹಿಸುವ ಒಪ್ಪಂದಕ್ಕೆ ಎಡಿಎನ್‌ಒಸಿ ಜತೆ ಸಹಿ ಹಾಕಿದ್ದರು.

* ಭಾರತವು ಶೇ.80ಕ್ಕೂ ಅಧಿಕ ಮಟ್ಟದಲ್ಲಿ ಕಚ್ಚಾ ತೈಲದ ಬೇಡಿಕೆ ಹೊಂದಿದ್ದು, ಇದರಲ್ಲಿ ಶೇ.8ರಷ್ಟನ್ನು ಯುಎಇ ಸರಬರಾಜು ಮಾಡುತ್ತಿದೆ.

* ವಿಶಾಖ ಪಟ್ಟಣದ ವ್ಯೂಹಾತ್ಮಕ ತೈಲಾಗಾರವು 12.3 ಲಕ್ಷ ಟನ್‌ ಇಂಧನ ಸಂಗ್ರಹದ ಸಾಮರ್ಥ್ಯ‌ವನ್ನು ಹೊಂದಿದೆ.

* ಮಂಗಳೂರಿನ ವ್ಯೂಹಾತ್ಮಕ ತೈಲಾಗಾರದ ಸಾಮರ್ಥ್ಯ‌ 15 ಲಕ್ಷ ಟನ್‌

* ಪಡೂರಿನ ತೈಲಾಗಾರದ ಸಾಮರ್ಥ್ಯ‌ 25 ಲಕ್ಷ ಟನ್‌ಗಳು

Comments are closed.