ರಾಷ್ಟ್ರೀಯ

ಆಪ್​ ಶಾಸಕರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ: ದೆಹಲಿ ಮುಖ್ಯ ಕಾರ್ಯದರ್ಶಿ ಆರೋಪ

Pinterest LinkedIn Tumblr


ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರ ನಿವಾಸದಲ್ಲಿ ಆಮ್​ ಆದ್ಮಿ ಪಕ್ಷದ ಇಬ್ಬರು ಶಾಸಕರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್​ ಆರೋಪಿಸಿದ್ದಾರೆ.

ಈ ಸಂಬಂಧ ದೆಹಲಿಯ ಲೆಪ್ಟಿನೆಂಟ್​ ಗವರ್ನರ್​ ಅನಿಲ್​ ಬೈಜಾಲ್​ ಅವರಿಗೆ ಅಂಶು ಪ್ರಕಾಶ್​ ಅವರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ದೂರಿನಲ್ಲಿ ಅವರು ಆಪ್​ನ ಶಾಸಕರಾದ ಅಜಯ್​ ದತ್​ ಮತ್ತು ಪ್ರಕಾಶ್​ ಜಾರ್ವಲ್​ ಸೋಮವಾರ ಸಂಜೆ ಕೇಜ್ರಿವಾಲ್​ ನಿವಾಸದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಆದರೆ ದೆಹಲಿ ಸಿಎಂ ಕಚೇರಿ ಈ ಆರೋಪವನ್ನು ನಿರಾಕರಿಸಿದೆ. ಜತೆಗೆ ಸೋಮವಾರ ಸಂಜೆ ಆಪ್​ ಶಾಸಕರು ಯಾರ ಮೇಲೂ ಹಲ್ಲೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಇದಕ್ಕೆ ಪೂರಕವಾಗಿ ಆಪ್​ ನಾಯಕಿ ಅತಿಷಿ ಮರ್ಲಾನಾ ಹೇಳಿಕೆ ನೀಡಿದ್ದು, ಮುಖ್ಯ ಕಾರ್ಯದರ್ಶಿಯ ವಿರುದ್ಧವೇ ಆರೋಪ ಹೊರಿಸಿದ್ದಾರೆ. ಸೋಮವಾರ ಸಂಜೆ ಜನವರಿಯಲ್ಲಿ ಪಡಿತರ ವಿತರಣೆ ಸಂಬಂಧ ಸಿಎಂ ನಿವಾಸದಲ್ಲಿ ಶಾಸಕರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಶಾಸಕರು ಕೇಳಿದ ಪ್ರಶ್ನೆಗೆ ಉತ್ತರಿಸಲು ಮುಖ್ಯ ಕಾರ್ಯದರ್ಶಿ ನಿರಾಕರಿಸಿದರು. ಅಷ್ಟೇ ಅಲ್ಲದೆ ಶಾಸಕರ ವಿರುದ್ಧ ಕೆಟ್ಟ ಪದ ಬಳಕೆ ಮಾಡಿ ಸಭೆಯಿಂದ ಹೊರನಡೆದರು ಎಂದು ತಿಳಿಸಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ದೆಹಲಿ ಬಿಜೆಪಿ ಶಾಸಕ ಓಪಿ ಶರ್ಮಾ ಅಂಶು ಪ್ರಕಾಶ್​ ಪೊಲೀಸರಿಗೆ ದೂರು ನೀಡಬೇಕು. ಪ್ರಜಾಪ್ರಭುತದಲ್ಲಿ ಇಂತಹ ಘಟನೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Comments are closed.