ರಾಷ್ಟ್ರೀಯ

230 ಕೋಟಿ ರೂ.ವಂಚನೆ: ಡಿಎಸ್‌ಕೆ ಮುಖ್ಯಸ್ಥ, ಪತ್ನಿ ಅರೆಸ್ಟ್‌

Pinterest LinkedIn Tumblr


ಹೊಸದಿಲ್ಲಿ: ಪುಣೆಯಲ್ಲಿ ನೆಲೆಗೊಂಡಿರುವ ಪ್ರಖ್ಯಾತ ಡಿಎಸ್‌ಕೆ ಸಮೂಹದ ಮುಖ್ಯಸ್ಥರಾಗಿರುವ ಬಿಲ್ಡರ್‌ ಡಿ ಎಸ್‌ ಕುಲಕರ್ಣಿ ಮತ್ತು ಅವರ ಪತ್ನಿ ಹೇಮಂತಿ ಕುಲಕರ್ಣಿ ಅವರನ್ನು ಇಂದು ಶನಿವಾರ ನಸುಕಿನ ವೇಳೆ ಪುಣೆ ಪೊಲೀಸರು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿಯಲ್ಲಿ ಬಂಧಿಸಿದರು. ಒಂದು ದಿನದ ಹಿಂದಷ್ಟೇ ಈ ದಂಪತಿಗೆ ಬಾಂಬೆ ಹೈಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿತ್ತು.

ಪುಣೆ ಪೊಲೀಸ್‌ ದಳದ ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಗಳು ಕುಲಕರ್ಣಿ ದಂಪತಿಯನ್ನು ದಿಲ್ಲಿಯ ಹೊಟೇಲ್‌ ಕೋಣೆಯೊಂದರಲ್ಲಿ ಬಂಧಿಸಿದರು. ಇವರನ್ನು ಇಂದೇ ಪುಣೆಯ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದೆಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಡಿಎಸ್‌ಕೆ ಎಂದೇ ಹೆಸರುವಾಸಿಯಾಗಿದ್ದ ಕುಲಕರ್ಣಿ ಅವರು ಡಿಎಸ್‌ಕೆ ಸಮೂಹ ಕಂಪೆನಿಗಳ ಪ್ರಧಾನ ಸಂಸ್ಥೆಯಾಗಿರುವ ಡಿ ಎಸ್‌ ಕುಲಕರ್ಣಿ ಡೆವಲಪರ್ ಲಿಮಿಟೆಡ್‌ (ಡಿಎಸ್‌ಕೆಡಿಎಲ್‌) ಇದರ ಅಧ್ಯಕ್ಷರು.

ಕುಲಕರ್ಣಿ ದಂಪತಿ ಎರಡು ಸಾವಿರಕ್ಕೂ ಅಧಿಕ ಹೂಡಿಕೆದಾರರಿಗೆ ಸುಮಾರು 230 ಕೋಟಿ ರೂ.ಗಳನ್ನು ವಂಚಿಸಿರುವ ಆರೋಪ ಹೊಂದಿದ್ದಾರೆ.

-ಉದಯವಾಣಿ

Comments are closed.