ದೆಹಲಿ: ಭಾರತೀಯ ಮುಸ್ಲಿಮರ ದೇಶಪ್ರೇಮವನ್ನು ಶಂಕಿಸಲಾಗುತ್ತಿದೆ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅಳಲು ತೋಡಿಕೊಂಡ ಬಳಿಕ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸೇನೆ ವಿರುದ್ಧ ಶಸ್ತ್ರ ಹಿಡಿದು ಭಯೋತ್ಪಾದಕ ಸಂಘಟನೆಗಳಲ್ಲಿರುವವ ಕುರಿತಾಗಿಯೂ ಆಲೋಚಿಸಲು ಸೂಚಿಸಿದ್ದಾರೆ.
“ಸೇನೆಯಲ್ಲಿ ಹುತಾತ್ಮರಾದ ಮುಸ್ಲಿಂ ಸೈನಿಕರ ಲೆಕ್ಕ ಇಡುವ ಓವೈಸಿ ಭಯೋತ್ಪಾದಕ ಸಂಘಟನೆಗಳಲ್ಲಿ ಸೇರಿಕೊಂಡು ಸೇನೆ ವಿರುದ್ಧ ನಿಂತವರನ್ನೂ ಅವರು ಎಣಿಸಲಿ” ಎಂದು ಸ್ವಾಮಿ ಇದೇ ವೇಳೆ ಟ್ವೀಟಿಸಿದ್ದಾರೆ.
ಸುಂಜುವಾನ್ ದಾಳಿಯಲ್ಲಿ ಹುತಾತ್ಮರಾದ ಆರು ಯೋಧರ ಪೈಕಿ ಐದು ಮಂದಿ ಕಾಶ್ಮೀರಿ ಮುಸ್ಲಿಮರಾಗಿದ್ದರು ಎಂದು ಓವೈಸಿ ಹೇಳಿದ್ದು ಸಾಕಷ್ಟು ವಿವಾದ ಸೃಷ್ಟಿಸಿದ್ದಲ್ಲದೇ ಎಲ್ಲೆಡೆ ಟೀಕೆ ವ್ಯಕ್ತವಾಗಿತ್ತು.
ರಾಜಕೀಯವಾಗಿ ಪರಸ್ಪರ ತದ್ವಿರುದ್ಧ ಸಿದ್ಧಾಂತಗಳನ್ನು ಪ್ರತಿಪಾದಿಸುವ ಸ್ವಾಮಿ ಹಾಗು ಓವೈಸಿ ಇತ್ತೀಚಿನ ದಿನಗಳಲ್ಲಿ ರಾಮ ಜನ್ಮಭೂಮಿ ವಿವಾದ, ಕಾಶ್ಮಿರ ಬಿಕ್ಕಟ್ಟು ಹಾಗು ದೇಶಪ್ರೇಮದ ವಿಚಾರಗಳ ಕುರಿತಂತೆ ಸಾಕಷ್ಟು ಬಾರಿ ವಾಕ್ಸಮರ ನಡೆಸಿದ್ದಾರೆ.
“ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಿಯರೆಂದು ಜರಿಯುವವರು ಇದರಿಂದ ಕಲಿಯಬೇಕಿದೆ. ನಾವು ಮುಸ್ಲಿಮರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಿದ್ದೇವೆ” ಎಂದು ಓವೈಸಿ ತಿಳಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ್ದ ಭಾರತೀಯ ಸೇನೆಯ ಉತ್ತರ ಕಮಾಂಡ್‌ನ ಕಮಾಂಡರ್ ದೇವರಾಜ್ ಅನ್ಬು “ನಮ್ಮ ಪಡೆಗಳಲ್ಲಿ ಯಾವರನ್ನೂ ಕೋಮಿವ ಆಧಾರದ ಮೇಲೆ ನೋಡುವುದಿಲ್ಲ. ನಮ್ಮ ಪ್ರತಿ ಸೌಲಭ್ಯದಲ್ಲೂ ಸರ್ವ ಧರ್ಮ ಸ್ಥಳಗಳಿವೆ” ಎಂದು ಹೇಳಿದ್ದರು.
ಹುತಾತ್ಮ ಯೋಧರ ಅಂತಿಮ ಸಂಸ್ಕಾರದಲ್ಲಿ ಜಮ್ಮು ಕಾಶ್ಮೀರದ ಜನತೆ ಭಾಗವಹಿಸಿದ್ದು ಈ ನಿಟ್ಟಿನಲ್ಲಿ ಕೋಮು ವಿಚಾರ ತರಲು ಯತ್ನಿಸಿದವರಿಗೆ ಸಾಕ್ಷಿಯಾಗಿದೆ ಎಂದು ದೇವರಾಜ್ ತಿಳಿಸಿದ್ದರು.
ಫೆಬ್ರವರಿ 10 ರಂದು ಭಾರೀ ಶಸ್ತ್ರಾಸ್ತ್ರ ಹೊಂದಿದ್ದ ಜೈಶೆ ಮೊಹಮ್ಮದ್ ಭಯೋತ್ಪಾದಕರು ಸೇನಾ ನೆಲೆ ಪ್ರವೇಶಿಸಿ ಗ್ರನೇಡ್ ಹಾಗು ಸ್ವಯಂಚಾಲಿತ ಶಸ್ತ್ರಗಳನ್ನು ಬಳಸಿ ದಾಳಿ ಮಾಡಿದ್ದರು.