ರಾಷ್ಟ್ರೀಯ

ಆಂಧ್ರ ಯೋಜನೆಗಳಿಗೆ 1,269 ಕೋಟಿ ರೂ ಬಿಡುಗಡೆ ಮಾಡಿದ ಕೇಂದ್ರ

Pinterest LinkedIn Tumblr


ಅಮರಾವತಿ: ಕೇಂದ್ರ ಬಜೆಟ್‌ನಲ್ಲಿ ಆಂಧ್ರಪ್ರದೇಶವನ್ನು ಕಡೆಗಣಿಸಲಾಗಿದೆ ಎಂದು ಟಿಡಿಪಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಬಾಬ್ತುಗಳ ಅಡಿಯಲ್ಲಿ ಒಟ್ಟು 1,269 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಿದೆ.

ಪೊಲಾವರಂ ಬಹು ಉದ್ದೇಶಿತ ಯೋಜನೆಗೆ 417.44 ಕೋಟಿ ರೂ ಒದಗಿಸಲಾಗಿದೆ. ಬಿಜೆಪಿ ಮತ್ತು ಟಿಡಿಪಿ ನಡುವೆ ಬಾಂಧವ್ಯ ಹಳಸಲು ಇದೇ ಮುಖ್ಯ ಕಾರಣವಾಗಿತ್ತು.

‘ಪೊಲಾವರಂ ಯೋಜನೆಯ ನೀರಾವರಿ ಕಾರ್ಯಗಳಿಗಾಗಿ ರಾಜ್ಯ ಸರಕಾರ 2014ರ ಏಪ್ರಿಲ್‌ 1ರ ಬಳಿಕ 417.44 ಕೋಟಿ ರೂ ವೆಚ್ಚ ಮಾಡಿದೆ. ಆ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ’ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಹಿರಿ ಜಂಟಿ ಕಾರ್ಯದರ್ಶಿ ಆರ್‌.ಎಸ್‌.ಪಿ ಶರ್ಮಾ ತಿಳಿಸಿದರು.

ಪೊಲಾವರಂ ಯೋಜನಾ ಪ್ರಾಧಿಕಾರದ ಮೂಲಕ 4,329 ಕೋಟಿ ರೂಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದರೆ, ಆಂಧ್ರ ಸರಕಾರ ಈಗಾಗಲೇ 7,200 ಕೋಟಿ ರೂ ಖರ್ಚು ಮಾಡಿದೆ.

ಪೊಲಾವರಂ ಯೋಜನೆಗೆ ಒಟ್ಟು 3,217.63 ಕೋಟಿ ರೂ ಖರ್ಚು ಮಾಡಲಾಗಿದ್ದು, ರಾಜ್ಯ ಸರಕಾರಕ್ಕೆ ಈ ಮೊತ್ತವನ್ನು ಕೇಂದ್ರ ಸರಕಾರ ಇನ್ನೂ ತುಂಬಿಕೊಟ್ಟಿಲ್ಲ ಎಂದು ಆಂಧ್ರ ವಿತ್ತಸಚಿವ ಯನಮಲ ರಾಮಕೃಷ್ಣುಡು ಅವರು ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ಅವರಿಗೆ ಬರೆದ ಪತ್ರದಲ್ಲಿ ನೆನಪಿಸಿದ್ದರು.

ಈ ಮೊತ್ತದ ಪೈಕಿ ಈಗ 417.44 ಕೋಟಿ ರೂಗಳನ್ನು ಈಗ ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಇದರ ಜತೆಗೆ, 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಆಂಧ್ರಪ್ರದೇಶಕ್ಕೆ 369.16 ಕೋಟಿ ರೂ.ಗಳ ಕಂದಾಯ ಕೊರತೆಯನ್ನು ಮರುಭರ್ತಿ ಮಾಡಿಕೊಡಲಾಗಿದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ‘ಪ್ರಾಥಮಿಕ ಅನುದಾನ’ವಾಗಿ 253.74 ಕೋಟಿ ರೂ ಬಿಡುಗಡೆ ಮಾಡಲಾಗಿದೆ.

ಅಂಗನವಾಡಿ ಸೇವಾ ಯೋಜನೆ ಅಡಿಯಲ್ಲಿ 196.92 ಕೋಟಿ ರೂ ಹಾಗೂ ನರೇಗಾ ಯೋಜನೆಯಡಿ 31.76 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Comments are closed.