ರಾಷ್ಟ್ರೀಯ

ಅಬುಧಾಬಿಯಲ್ಲಿ ಮೊದಲ ಹಿಂದೂ ಮಂದಿರಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ

Pinterest LinkedIn Tumblr


ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಶ್ಚಿಮ ಏಷ್ಯಾ ಪ್ರವಾಸದ ವೇಳೆ ಅಬುಧಾಬಿಯಲ್ಲಿ ನಿರ್ಮಾಣವಾಗಲಿರುವ ಮೊದಲ ಹಿಂದೂ ದೇವಾಲಯಕ್ಕೆ ಭಾನುವಾರ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಪ್ರಸ್ತುತ ಯುನೈಟೆಡ್ ಅರಬ್‌ ಎಮಿರೇಟ್ಸ್‌ (ಯುಎಇ) ನ ದುಬೈನಲ್ಲಿ ಮಾತ್ರ ಒಂದು ಹಿಂದೂ ದೇವಾಲಯವಿದೆ.

ಮೋದಿ ಅವರು 2015ರಲ್ಲಿ ಮೊದಲ ಬಾರಿ ಭೇಟಿ ನೀಡಿದ್ದಾಗ ಯುಎಇ ಸರಕಾರ ಅಬುಧಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಭೂಮಿ ನೀಡುವುದಾಗಿ ಘೋಷಿಸಿತ್ತು. ಅದರಂತೆ ಅಲ್‌ ವತಾಬದಲ್ಲಿ 20,000 ಚದರ ಮೀಟರ್‌ ವಿಸ್ತೀರ್ಣದ ಭೂಮಿ ಮಂಜೂರು ಮಾಡಿತ್ತು. ಅಲ್ಲಿ ಮಂದಿರವನ್ನು ಖಾಸಗಿ ದೇಣಿಗೆಗಳಿಂದ ನಿರ್ಮಿಸಲಾಗುತ್ತಿದೆ. ಬೊಚಸನ್ವಾಸಿ ಶ್ರೀ ಅಕ್ಷರ್ ಪುರುಷೋತ್ತಮ್‌ ಸ್ವಾಮಿನಾರಾಯಣ ಸಂಸ್ಥಾ (ಬಿಎಪಿಎಸ್‌) ಈ ಮಂದಿರದ ಆಡಳಿತ ನೋಡಿಕೊಳ್ಳಲಿದೆ.

ಯುಎಇಯಲ್ಲಿ ಒಟ್ಟು 26 ಲಕ್ಷ ಭಾರತೀಯರಿದ್ದು ಒಟ್ಟು ಜನಸಂಖ್ಯೆಯ ಶೇ 30ರಷ್ಟಿದ್ದಾರೆ.

ಅಬುಧಾಬಿಯಲ್ಲಿ ನಿರ್ಮಾಣಗೊಳ್ಳಲಿರುವ ಹಿಂದೂ ದೇವಸ್ಥಾನದ ಚಿತ್ರವಿದು. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಫೆ.11) ಈ ಮಂದಿರದ ಶಿಲಾಪೂಜನ ವಿಧಿ ನೆರವೇರಿಸಲಿದ್ದಾರೆ.

2020ರ ವೇಳೆಗೆ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ. ದುಬೈ-ಅಬುಧಾಬಿ ಹೆದ್ದಾರಿಯ ಪಕ್ಕದಲ್ಲಿ ಅಬು ಮುರೈಖಾ ಎಂಬಲ್ಲಿ ಸಂಪೂರ್ಣ ಹಿಂದೂ ಸಾಂಪ್ರದಾಯಿಕ ಶೈಲಿಯಲ್ಲಿ ಮಂದಿರ ನಿರ್ಮಾಣವಾಗಲಿದೆ. ಶಿಲೆಗಳ ಕೆತ್ತನೆಯನ್ನು ಭಾರತದಲ್ಲೇ ಪೂರ್ಣಗೊಳಿಸಿ ಯುಎಇನಲ್ಲಿ ಜೋಡಿಸುವ ಕಾರ್ಯ ನಡೆಯಲಿದೆ. ಯಾತ್ರಿಕರ ಕೇಂದ್ರ, ಪ್ರಾರ್ಥನಾ ಮಂದಿರಗಳು, ಪ್ರದರ್ಶನ ಕೇಂದ್ರ, ಅಧ್ಯಯನ ಚಾವಡಿಗಳು, ಮಕ್ಕಳ ಆಟದ ಬಯಲು, ಗಾರ್ಡನ್‌ಗಳು, ಕಾರಂಜಿಗಳು ಮತ್ತು ಫುಡ್‌ ಕೋರ್ಟ್‌ ಈ ಮಂದಿರ ಸಮುಚ್ಚಯದಲ್ಲಿ ಇರಲಿದೆ. ಎಲ್ಲ ಧಾರ್ಮಿಕ ನಂಬಿಕೆಯವರಿಗೂ ಈ ಮಂದಿರಕ್ಕೆ ಪ್ರವೇಶ ಇರುತ್ತದೆ.

Comments are closed.